ಕಂಪ್ಲಿ: ತಾಲೂಕಿನ ವಿಮುಕ್ತ ದೇವದಾಸಿಯರ ಸಮೀಕ್ಷೆ ನಡೆಸಿ ಪಟ್ಟಿಯಲ್ಲಿ ಕೈಬಿಟ್ಟುಹೋಗಿರುವ ವಿಮುಕ್ತ ದೇವದಾಸಿಯರನ್ನು ಸಮೀಕ್ಷಾ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ತಹಸೀಲ್ದಾರ್ ಜೂಗಲ ಮಂಜುನಾಯಕ ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 563 ವಿಮುಕ್ತ ದೇವದಾಸಿಯರಿದ್ದು, 120ಕ್ಕೂ ಅಧಿಕ ವಿಮುಕ್ತ ದೇವದಾಸಿಯರು ಪಟ್ಟಿಯಲ್ಲಿ ಇಲ್ಲ. ಆದ್ದರಿಂದ ಬಿಟ್ಟುಹೋದವರನ್ನು ಪಟ್ಟಿಗೆ ಸೇರಿಸಿ ನಿವೇಶನ, ವಸತಿ ಸೌಲಭ್ಯ, ಕುಟುಂಬಕ್ಕೆ ಐದು ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು. ಪಟ್ಟಿಗೆ ಸೇರದ ವಿಮುಕ್ತ ದೇವದಾಸಿಯರು ಪಿಂಚಣಿ ಸೇರಿದಂತೆ ಇತರ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರಲು ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು. ದೌರ್ಜನ್ಯದಿಂದ ಹೊರಬರಲು ಸರ್ಕಾರ ಯೋಚಿತ ಸಮಗ್ರ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಮಸಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ನಿಂಗಪ್ಪ, ಸಂಡೂರು ತಾಲೂಕು ಕಾರ್ಯದರ್ಶಿ ಎಚ್.ದುರುಗಮ್ಮ, ಕುರುಗೋಡು ತಾಲೂಕು ಕಾರ್ಯದರ್ಶಿ ಸಿ.ವೀರೇಶ, ರಾಜ್ಯ ಮಕ್ಕಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಮೇಶ್, ವಿಮುಕ್ತ ದೇವದಾಸಿಯರಾದ ರುದ್ರಮ್ಮ, ಮಾರೆಮ್ಮ, ತಾಯಮ್ಮ, ಸುಂಕಮ್ಮ, ಕೊರ‌್ರಮ್ಮ ಇತರರಿದ್ದರು.