

ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸ್ವರ್ಣಗೌರಿ ಮಾತೃಮಂಡಳಿ ಕಲ್ಲಬೆಟ್ಟು, ಕರಿಂಜೆ, ಮಾರೂರು ಸಹಯೋಗದಲ್ಲಿ ನೂತನ ಶ್ರೀ ಗಣೇಶ ಸೇವಾಧಾಮ ಕಟ್ಟಡ ನಿರ್ಮಾಣ ಯೋಜನೆ ಕುರಿತು ಸಮಾಲೋಚನೆ ಸಭೆ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ನಡೆಯಿತು.
ಟ್ರಸ್ಟ್‌ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟು ರಾಜ್ಯ ಹೆದ್ದಾರಿ ಬಳಿಯಲ್ಲಿ 35 ಸೆಂಟ್ಸ್ ಜಾಗ ಟ್ರಸ್ಟ್ ಹೆಸರಿನಲ್ಲಿ ಈಗಾಗಲೇ ಖರೀದಿಸಲಾಗಿದೆ. ಈಗಾಗಲೇ ಅಂದಾಜು ಮೊತ್ತ 1.50 ಕೋಟಿ ರೂ.ಮೂಲಸೌಕರ್ಯ ಒಳಗೊಂಡಿರುವ ಕಟ್ಟಡದ ನೀಲಿ ನಕಾಶೆ ತಯಾರಿಸಿದ್ದು, ಪುರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ತೆಗೆದುಕೊಳ್ಳಲಾಗಿದೆ. ದಾನಿಗಳ ಸಹಕಾರದಿಂದ ಈ ಕಟ್ಟಡ ನಿರ್ಮಿಸಲಾಗುವುದು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕಟ್ಟಡ ನಿರ್ಮಾಣದಿಂದ ನಿರಂತರ ಚಟುವಟಿಕೆಗಳಿಗೆ ಪೂರಕವಾಗುವುದು ಎಂದರು.
ಟ್ರಸ್ಟಿಗಳಾದ ಶ್ರೀಪತಿ ಭಟ್, ಪದ್ಮಯ್ಯ ಬಿ.ಸುವರ್ಣ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಸ್ವರ್ಣಗೌರಿ ಮಾತೃಮಂಡಳಿಯ ಅಧ್ಯಕ್ಷೆ ಪ್ರಿಯಾಂಕಾ ರಂಜಿತ್ ಬರ್ಮನ್ ಉಪಸ್ಥಿತರಿದ್ದರು. ಜಿ.ಕೆ.ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ರೋಹನ್ ಅತಿಕಾರಿಬೆಟ್ಟು ನಿರೂಪಿಸಿದರು.