ಡ್ರಗ್ಸ್ ಜೊತೆಗೆ ಕಲಿ ಯೋಗೀಶನ ಸಹಚರ ಬಂಧನ

Published on

ಮಂಗಳೂರು: ಕರ್ನಾಟಕ ಹಾಗೂ ಕೇರಳದ ವಿವಿಧ ಠಾಣೆಗಳಲ್ಲಿ ಪ್ರಕರಣ ಎದುರಿಸುತ್ತಿದ್ದ ಕಲಿ ಯೋಗೀಶನ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ನಿಷೇಧಿತ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿ ಅಬ್ದುಲ್ ಅಸೀರ್(32) ಬಂಧಿತ ವ್ಯಕ್ತಿ. ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬ್ದುಲ್ ಅಸೀರ್ ಮಾದಕ ವಸ್ತುಗಳೊಂದಿಗೆ ಕಾಸರಗೋಡಿನಿಂದ ಮಂಗಳೂರು ನಗರಕ್ಕೆ ಬಂದು ನಂತೂರು ಪರಿಸರದಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆರೋಪಿ ವಶದಿಂದ ಸುಮಾರು 5 ಲಕ್ಷ ಮೌಲ್ಯದ 53 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

*ಹಲವು ಪ್ರಕರಣಗಳಲ್ಲಿ ಆರೋಪಿ

ಆರೋಪಿ ಅಬ್ದುಲ್ ಅಸೀರ್‌ಭೂಗತ ಪಾತಕಿ ಕಲಿ ಯೋಗೀಶನ ಸಹಚರನಾಗಿದ್ದು, ಈ ಹಿಂದೆ ಪುತ್ತೂರು ನಗರದಲ್ಲಿ ರಾಜಧಾನಿ ಜ್ಯುವೆಲರ್ಸ್ ಗೆ ಶೂಟೌಟ್ ಮಾಡಿದ ಪ್ರಕರಣ ಆರೋಪಿಯಾಗಿದ್ದ, ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಈ ಹಿಂದೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಶಾಫೀಕ್ ಕೊಲೆ ಪ್ರಕರಣ, ಪೋಕೋ ಪ್ರಕರಣ, ಕಳ್ಳತನ ಪ್ರಕರಣ ಹಾಗೂ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ದಾಖಲಾಗಿದ್ದು, ವಾರಂಟ್ ಜಾರಿಯಲ್ಲಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net