ಯಕ್ಷಗಾನವೆಂದರೆ ಕಲೆಯಷ್ಟೇ ಅಲ್ಲ, ದೇವರ ಪೂಜೆ...

Kala Lead
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

50 ಕಲಾವಿದರಿಗೆ ಕಲಾರಂಗ ಸುವರ್ಣ ಪುರಸ್ಕಾರ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇವರಿಗೆ ಹರಕೆ ಹೇಳಿಕೊಳ್ಳುವ ಕಲೆ ಇದ್ದರೆ ಅದು ಯಕ್ಷಗಾನ ಮಾತ್ರ. ಸಂಗೀತ ಸೇರಿದಂತೆ ಯಾವ ಕಲೆಯಲ್ಲೂ ಈ ಪದ್ಧತಿ ಇಲ್ಲ. ಹೀಗಾಗಿ ಯಕ್ಷಗಾನ ಕಲೆಯಷ್ಟೇ ಅಲ್ಲ, ಅದು ದೇವರ ಪೂಜೆ. ಪುಣ್ಯಪ್ರದವಾದ ಶ್ರೇಷ್ಠ ಕಲೆ. ಉಡುಪಿ ಮಠದಲ್ಲಿ ಈ ಕಲೆ ಉದಯಿಸಿದ್ದು, ಕಲಾವಿದರು ಶತಮಾನಗಳಿಂದ ಬೆಳೆಸಿಕೊಂಡು ಬಂದಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ರಾಜಾಂಗಣದಲ್ಲಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಉಡುಪಿ ಯಕ್ಷಗಾನ ಕಲಾರಂಗ ಮೇ 31ರಂದು ಸಂಜೆ ಆಯೋಜಿಸಿದ್ದ ಯಕ್ಷಗಾನ ಕಲಾವಿದರ ಸಮಾವೇಶ ಮತ್ತು ಸಂಸ್ಥೆಯ ಸುವರ್ಣ ಸಡಗರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ವ್ಯಾಯಾಮ ಕಲೆಯೂ ಸಹ

ಇದು ವ್ಯಾಯಾಮ ಕಲೆಯೂ ಆಗಿದೆ. ಯಕ್ಷ ಕಲಾವಿದರು 90 ವರ್ಷ ಮೇಲ್ಪಟ್ಟು ಅಥವಾ ಶತಾಯುಷಿ ಆಗಲು ಯಕ್ಷ ಕಲಾವಿದರಾಗಿರುವುದೇ ಕಾರಣ. ಟಿವಿ, ಮೊಬೈಲ್​ ಬಂದ ಬಳಿಕವೂ ಆಕರ್ಷಣೆ, ಶ್ರೀಮಂತಿಕೆ ಉಳಿಸಿಕೊಂಡ ಕಲೆಯಿದು. ಅಂತಹ ಕಲೆಯ ಹೊಳಪನ್ನು ಯಕ್ಷಗಾನ ಕಲಾರಂಗ ಅನೇಕ ದಾನಿಗಳ ನೆರವಿನಿಂದ ಎಲ್ಲೆಡೆ ಪಸರಿಸುತ್ತಿದ್ದಾರೆ. ತಲೆತಲಾಂತರಕ್ಕೂ ಈ ಕಲೆ ಮುಂದುವರಿಯಲಿ ಎಂದು ಸುಗುಣೇಂದ್ರ ಶ್ರೀಪಾದರು ನುಡಿದರು.

ಅರ್ಥಪೂರ್ಣ ಕಾರ್ಯ

Kota
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅಶಕ್ತ ಕಲಾವಿದರನ್ನು ಗುರುತಿಸಿ ಅವರ ಸಮಸ್ಯೆ ನಿವಾರಿಸುವುದು ಅಷ್ಟು ಸುಲಭವಲ್ಲ. ಆದರೆ, ಅದೆಲ್ಲವನ್ನೂ ಸಮರ್ಥವಾಗಿ ಯಕ್ಷಗಾನ ಕಲರಂಗ ನಿಭಾಯಿಸುತ್ತಿದೆ ಎನ್ನುವುದು ನಮಗೆಲ್ಲರಿಗೂ ಹೆಮ್ಮೆ. ಏಕಕಾಲದಲ್ಲಿ 50 ಹಿರಿಯ ಕಲಾವಿದರನ್ನು ಸಹಸ್ರ ಸಂಖ್ಯೆಯಲ್ಲಿ ಸೇರಿರುವ ತೆಂಕು, ಬಡಗು ಹಾಗೂ ಬಡಾಬೆಡಗಿನ ಹಿರಿ-ಕಿರಿಯ ಕಲಾವಿದರ ಸಮ್ಮುಖದಲ್ಲಿ ಸನ್ಮಾನಿಸಿ, 50 ಸಾವಿರ ರೂ. ಮೌಲ್ಯದ ಪುರಸ್ಕಾರ ನೀಡಿರುವುದು ಅರ್ಥಪೂರ್ಣವಾಗಿದೆ ಎಂದರು.

ಹಣವಿಲ್ಲದೆಯೂ ಸೇವೆ ಸಾಧ್ಯ

Heggunje
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್​ ಟ್ರಸ್ಟ್​ ನ ಅಧ್ಯಕ್ಷ ಡಾ. ಎಚ್​.ಎಸ್​. ಶೆಟ್ಟಿ ಸುವರ್ಣ ನುಡಿ ಮಾತನಾಡಿ, ಚಿಕ್ಕವನಿದ್ದಾಗ ಸಭೆಯೊಂದರಲ್ಲಿ ಪಾಲ್ಗೊಂಡಿದ್ದಾಗ ಹಣವಿದ್ದರೆ ಮಾತ್ರ ಸಮಾಜಸೇವೆ ಮಾಡಬಹುದು ಅಂದುಕೊಂಡಿದ್ದೆ. ಆದರೆ, ಹಣವಿಲ್ಲದಿದ್ದರೂ ಸಮಾಜದ ಬಹಳಷ್ಟು ಸೇವೆ ಮಾಡಬಹುದು ಎನ್ನುವುದನ್ನು ಯಕ್ಷಗಾನ ಕಲಾರಂಗದವರ ಕಾರ್ಯದಿಂದ ಅರಿತಿದ್ದೇನೆ. ಯಕ್ಷಗಾನ ಕಲೆ ವ್ಯಾಪಾರೀಕರಣ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದು ಸುಳ್ಳು. ಕೆಲವೊಂದು ಕಲಾವಿದರು ಮಾತ್ರ ವ್ಯಾಪಾರಕ್ಕೆ ಇಳಿದಿದ್ದಾರೆ ಎಂದರು.

ವಿದ್ಯಾ ಪೋಷಕ್​ ಮಾದರಿ

Ballal
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರಿಗೂ ಸುವರ್ಣ ಉಡುಗೊರೆ ವಿತರಿಸಿದ ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ಮಾತನಾಡಿ, ನಾನೊಬ್ಬ ಯಕ್ಷಗಾನ ಕಲಾಪ್ರೇಮಿ. ಹೀಗಾಗಿ ಈ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಿದರೆ ಉತ್ತಮ ಸಮಾಜ ನಿಮಾರ್ಣವಾಗುತ್ತದೆ. ಆ ನಿಟ್ಟಿನಲ್ಲೂ ಯಕ್ಷಗಾನ ಕಲಾರಂಗ ವಿದ್ಯಾ ಪೋಷಕ್​ ಮೂಲಕ ಕೊಡುಗೆ ನೀಡುತ್ತಿರುವುದು ಮಾದರಿ ಎಂದರು.

ಸಾಧನೆ ಎಂದಿಗೂ ಶಾಶ್ವತ

Shankar
ಅಧ್ಯಕ್ಷತೆ ವಹಿಸಿದ್ದ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್​ನ ಅಧ್ಯಕ್ಷ ನಾಡೋಜ ಜಿ.ಶಂಕರ ಮಾತನಾಡಿ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿದೆ. ಅದರಂತೆ ಈ ಕಾರ್ಯಕ್ರಮದ ಕುರಿತ ಟೀಕೆಗಳು ಸಾಯುತ್ತದೆ, ಸಾಧಕರನ್ನು ಮೌಲ್ಯದೊಂದಿಗೆ ಗೌರವಿಸಿದ ಕಾರ್ಯ ಸದಾ ನೆನಪಿನಲ್ಲಿ ಉಳಿಯುತ್ತದೆ. ಇಂತಹ ಕಾರ್ಯಕ್ಕೆ ನನ್ನ ಆರ್ಥಿಕ ಸಹಕಾರ ಸದಾ ಇರುತ್ತದೆ ಎಂದರು.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಜ್ವಲ ಡೆವಲಪರ್ಸ್​ನ ಮಾಲೀಕ ಪುರುಷೋತ್ತಮ ಶೆಟ್ಟಿ, ಕಾರ್ತಿಕ ಎಸ್ಟೇಟ್​ನ ಮಾಲೀಕ ಹರಿಯಪ್ಪ ಕೋಟ್ಯಾನ್​ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಕಾರ್ಯಕ್ರಮ ನಿರ್ವಹಿಸಿದರು.

ಪಾತ್ರಧಾರಿಗಳ ಬದುಕು ಕಟ್ಟುವ ಕಲಾರಂಗ

Visshwa
ಪೇಜಾವರ ವಿಶ್ವಪ್ರಸನ್ನ ಶ್ರೀ ಅನುಗ್ರ ಸಂದೇಶ ನೀಡಿ, ಯಕ್ಷರಂಗದಲ್ಲಿ ಭಲ್ಲಿರೇನಯ್ಯ, ಬಂದಂತಹ ಸ್ಥಳ... ಹೀಗೆ ಪಾತ್ರ ಪರಿಚಯ ಮಾಡುವ ಪಾತ್ರಧಾರಿಗಳ ಜೀವನ ಬಲ್ಲವರಿಲ್ಲ. ಆದರೆ, ಯಕ್ಷಗಾನ ಕಲಾರಂಗವು ಪಾತ್ರಧಾರಿಯ ಸ್ಥಾನದಲ್ಲಿ ನಿಂತು ಎಲ್ಲ ಪಾತ್ರಧಾರಿಗಳ ಬದುಕನ್ನು ಕಟ್ಟಿ ನಿಲ್ಲಿಸುತ್ತಿದ್ದಾರೆ. ಅವರ ಕಾರ್ಯ ಅನನ್ಯ, ವಿಶಿಷ್ಟ ಎಂದರು.

ತಲಾ 50 ಸಾವಿರ ರೂ. ಸಹಾಯ

ನಾಲ್ಕೈದು ದಶಕಗಳ ಕಾಲ ಯಕ್ಷಗಾನ ಕಲಾಸೇವೆ ಸಲ್ಲಿಸಿದ, 70 ವರ್ಷ ದಾಟಿದ 50 ಕಲಾವಿದರಿಗೆ ಲಕ ಹಾಗೂ ತಲಾ 50 ಸಾವಿರ ರೂ. ಮೊತ್ತದ ಗೌರವದೊಂದಿಗೆ ಯಕ್ಷಗಾನ ಕಲಾರಂಗ-ಸುವರ್ಣ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ ಇವರು ಪುರಸ್ಕಾರ ಸ್ವೀಕರಿಸಿದ ಕಲಾವಿದರ ಪರಿಚಯ ಮಾಡಿದರು. ಆರು ಜಿಲ್ಲೆಗಳ 40 ಮೇಳಗಳ 900ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೃತಪಟ್ಟ ಕಲಾವಿದರ ಕುಟುಂಬಕ್ಕೆ ಸಾಂತ್ವನ ನಿಧಿಯನ್ನೂ ನೀಡಲಾಯಿತು. ರಾಜ್ಯದ ಆರು ಜಿಲ್ಲೆಗಳ 40 ಮೇಳಗಳ 900ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದರು.

ಇಂದು ಪುರಸ್ಕಾರ ಸ್ವೀಕರಿಸಿದ ಈ ಕಲಾವಿದರು ಶ್ರೀಮಂತರಲ್ಲದೇ ಇರಬಹುದು. ಆದರೆ, ಜನರ ಬದುಕನ್ನು, ಯಕ್ಷಗಾನ ಕಲೆ, ಸಂಸತಿಯನ್ನು ಶ್ರೀಮಂತಗೊಳಿಸಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ, ಗೌರವಿಸಿರುವುದು ಕಲಾವಿದರ ಪಾಲಿನ ಹಬ್ಬವಾಗಿದೆ. ಇದು ಯಕ್ಷಗಾನದ ದೀಪಾವಳಿ ಹಬ್ಬವಾಗಿದೆ. | ಗುರ್ಮೆ ಸುರೇಶ ಶೆಟ್ಟಿ. ಕಾಪು ಶಾಸಕ ಕಲಾವಿದರ ನೋವು, ಸಮಸ್ಯೆಗಳಿಗೆ ಸ್ಪಂದಿಸಿ ಯಕ್ಷಗಾನದ ಸ್ವಾಭಿಮಾನ ಹೆಚ್ಚಿಸುವ ಕಾರ್ಯ ಯಕ್ಷಗಾನ ಕಲಾರಂಗದಿಂದ ಆಗಿದೆ. ಅದು ಉಡುಪಿ ಭಾಗದಿಂದ ಆಗುತ್ತಿರುವುದು ಕ್ಷೇತ್ರದ ಶಾಸಕನಾಗಿ ನನಗೆ ಹೆಮ್ಮೆ ಅಗುತ್ತಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಯಕ್ಷಗಾನ ಕಲಾರಂಗ ಮಾಡುತ್ತಿದೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net