

ಮಂಗಳೂರು: ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ರಾಲ್ಫ್ ರೋಶನ್ ಕ್ರಾಸ್ತಾ ಇವರಿಗೆ ಕಾರ್ವಾಲ್ ಕುಟುಂಬ ಹಾಗೂ ಮಾಂಡ್ ಸೊಭಾಣ್ ಜಂಟಿಯಾಗಿ ಕೊಡ ಮಾಡುವ 2024 ನೇ ಸಾಲಿನ ಕಲಾಕಾರ್ ಪುರಸ್ಕಾರ ಘೋಷಿಸಲಾಗಿದೆ.
ಬೇಳ ಮೂಲದ ಪ್ರಸ್ತುತ ಮಂಗಳೂರಿನ ಕೆಲರಾಯ್ ಇಲ್ಲಿ ವಾಸ್ತವ್ಯ ಇರುವ ರೋಶನ್ ಇವರು ಸಂತ ಎಲೋಶಿಯಸ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಸಣ್ಣ ಪ್ರಾಯದಲ್ಲೇ ಗಿಟಾರ್ ಮೇಲೆ ಪ್ರೀತಿ ಬೆಳೆಸಿದ ಇವರು ಸ್ವ ಪರಿಶ್ರಮದಿಂದ ಗಿಟಾರಿನಲ್ಲಿ ಪ್ರಾವೀಣ್ಯ ಪಡೆದರು. ಹಲವಾರು ಸಂಗೀತ ತಂಡಗಳಲ್ಲಿ ಸಕ್ರೀಯ ಸದಸ್ಯರಾಗಿ ದುಡಿದಿದ್ದಾರೆ. ಸಂಗೀತಗಾರರಾದ ಹೆನ್ರಿ ಡಿಸೋಜ, ಲೊರ್ನಾ, ವಿಕ್ಟರ್ ಕೊನ್ಸೆಸೊ, ಮೆಲ್ವಿನ್ ಪೆರಿಸ್, ಮಿಕ್ ಮ್ಯಾಕ್ಸ್, ರೋಶನ್ ಬೆಳ್ಮಣ್, ಲೊಯ್ಡ ರೇಗೊ, ಪ್ರಜೋತ್ ಡೆಸಾ ಹಾಗೂ ಇತರರ ಸಂಗೀತ ರಸಮಂಜರಿಗಳಲ್ಲಿ ಲೀಡ್ ಗಿಟಾರ್ ನುಡಿಸಿದ್ದಾರೆ.
ನ.3 ರಂದು ಭಾನುವಾರ ಸಾಯಂಕಾಲ 6 ಗಂಟೆಗೆ ಕಲಾಂಗಣದಲ್ಲಿ ನಡೆಯುವ 275 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕೊಂಕಣಿ ಪ್ರದರ್ಶನ ಕಲೆಗಳ ಕಲಾವಿದರನ್ನು ಗೌರವಿಸಲು 2005ರಲ್ಲಿ ಕೊಂಕಣಿ ಭಾಷಾ ತಜ್ಞ ಡಾ ಪ್ರತಾಪ್ ನಾಯ್ಕ ಇವರ ಕಾರ್ವಾಲ್ ಕುಟುಂಬ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಹೆಸರಲ್ಲಿ ಈ ಪುರಸ್ಕಾರವನ್ನು ಸ್ಥಾಪಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.