

ಚನ್ನರಾಯಪಟ್ಟಣ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರು ಕಾಡುಬಸವೇಶ್ವರ ಸ್ವಾಮಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ನೊಣವಿನಕೆರೆ ಸೋಮನ ಕಟ್ಟೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿ ಋಷಭ ದೇಶಿ ಕೇಂದ್ರ ಸ್ವಾಮೀಜಿ ತಿಳಿಸಿದರು.
ಚನ್ನರಾಯಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಟ್ಟ ಆಲೋಚನೆ ತೊರೆದು ಉತ್ತಮ ಸಾಧನೆ ಮಾಡಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸಲು ಒಳ್ಳೆಯ ಯೋಜನೆಗಳನ್ನು ರೂಪಿಸುವ ಚಿಂತನೆ ಮಾಡಬೇಕು. ಇದರಿಂದ ಸಮಾಜದ ಅಭಿವೃದ್ಧಿಯಾಗುತ್ತದೆ. ಬಸವಣ್ಣ ಅವರ ವಚನಗಳನ್ನು ಪಾಲನೆ ಮಾಡಬೇಕು. ಕಾಡುಬಸವೇಶ್ವರ ಸ್ವಾಮಿ ಕ್ಷೇತ್ರದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು ಎಲ್ಲರ ಸಹಕಾರ ನೀಡಬೇಕು ಎಂದು ಕೋರಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಪಟೇಲ್ ಗಂಗೆಗೌಡ (ರಾಜಣ್ಣ) ಮಾತನಾಡಿ, ತಾಲೂಕು ಕೇಂದ್ರದಲ್ಲಿ ಸರ್ಕಾರದಿಂದ ವೀರಶೈವ ಲಿಂಗಾಯತ ಭವನ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ವ್ಯವಸ್ಥೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶ್ರೀಗಳ ಆಶೀರ್ವಾದ ಇರಲಿ ಎಂದು ಕೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಪರಮೇಶ್ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಸದಸ್ಯತ್ವ ನೋಂದಣಿ ಮಾಡಿಸುವ ಮೂಲಕ ಸಂಘಟನೆಗೆ ಹೆಚ್ಚು ಶಕ್ತಿ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಹಾಗೂ ತಾಲೂಕು ನಿರ್ದೇಶಕರುಗಳನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. ನೊಣವಿನಕೆರೆ ಅಭಿನವ ಕಾಡು ಸಿದ್ದೇಶ್ವರ ಸ್ವಾಮೀಜಿ. ಷದ್ಭವ ರಹಿತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರುಗಳಾದ ಪುನೀತ್ ಪಟೇಲ್, ಭಕ್ತರಹಳ್ಳಿ ಪುಟ್ಟರಾಜ್, ಪ್ರಭುಸ್ವಾಮಿ, ಎನ್.ಆರ್. ಕೃಪಾಶಂಕರ್, ಶಿಕ್ಷಕರುಗಳಾದ ಸಿದ್ದೇಶ್, ಭಾರತಿ, ಶಿವಾನಂದ್, ಇತರರು ಇದ್ದರು.