Kadamba District: ಉತ್ತರ ಕನ್ನಡ 2 ಹೋಳು ಮಾಡಲು ಆಗ್ರಹಿಸಿ ಹೋರಾಟ

Kadamba District
Published on

ಶಿರಸಿ; ಕದಂಬ ಕನ್ನಡ ಜಿಲ್ಲೆ (Kadamba District) ರಚನೆಗೆ ಆಗ್ರಹಿಸಿ ಹೋರಾಟಕ್ಕೆ ಚಾಲನೆ ದೊರಕಿದೆ. ಕದಂಬ ಕನ್ನಡ ಜಿಲ್ಲಾ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸೋಮವಾರ ಸಾಯಂಕಾಲದಿಂದಲೇ ಮಾರಿಕಾಂಬಾ ಸನ್ನಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಬೆಳಗ್ಗೆ ಚಂಡಿಕಾ ಯಾಗದ ಪೂರ್ಣಾಹುತಿ ನೆರವೇರಿಸಿದ ಸಮಿತಿಯ ಪದಾಧಿಕಾರಿಗಳು, ದೇವಿ ಸನ್ನಿಧಿಯಲ್ಲಿ ಆಗ್ರಹ ಪತ್ರವಿಟ್ಟು ಪೂಜೆ ಸಲ್ಲಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಎಸಿ ಕಾವ್ಯಾರಾಣಿ ಅವರ ಮೂಲಕ ಸಿಎಂಗೆ ಬರೆದ ಆಗ್ರಹ ಪತ್ರ ಸಲ್ಲಿಸಿದರು. ಅನಂತಮೂರ್ತಿ ಹೆಗಡೆ ಮಾತನಾಡಿ, ಪ್ರತ್ಯೇಕ ಜಿಲ್ಲೆ ಹೋರಾಟ ಇಲ್ಲಿಯವರೆಗೆ ಒಂದು ಲೆಕ್ಕ. ಇನ್ನು ಮುಂದಿನ ಹೋರಾಟ ಬೇರೆನೇ ಲೆಕ್ಕ. ದೈವಬಲದೊಂದಿಗೆ ಜನಬಲ ಕೂಡಿದರೆ ಕದಂಬ ಕನ್ನಡ ಜಿಲ್ಲೆ ಹೋರಾಟ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಾಗಿ ಘಟ್ಟದ ಮೇಲಿನ ಎಲ್ಲ ತಾಲೂಕುಗಳನ್ನು ಒಳಗೊಂಡು ಕದಂಬ ಕನ್ನಡ ಜಿಲ್ಲೆ( Kadamba District )ಆಗಲೇಬೇಕಿದೆ. ಇದು ಹೋರಾಟದ ಮೊದಲ ಹೆಜ್ಜೆಯಾಗಿದೆ. ಮುಂದಿನ ದಿನದಲ್ಲಿ ಪ್ರತಿ ಗ್ರಾಪಂ ಹಂತದಲ್ಲಿ ಸಮಿತಿ ರಚಿಸಿ ಹೋರಾಟ ನಡೆಸಲಾಗುವುದು ಎಂದರು.

Kadamba District ಏಕೆ ಬೇಕು..?

ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ನಮ್ಮ ದೈನಂದಿನ ಕೆಲಸಕ್ಕೆ ಜಿಲ್ಲಾಕೇಂದ್ರ ಕಾರವಾರಕ್ಕೆ ತೆರಳುವುದು ಅನಿವಾರ್ಯ. ಪ್ರತಿಯೊಬ್ಬರೂ ಈ ಹೋರಾಟಕ್ಕೆ ಜೊತೆಯಾಗಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಸಿ.ಎಫ್.ಈರೇಶ ಮಾತನಾಡಿ, ಹೋರಾಟದ ಕಿಚ್ಚು ಈ ದೇಶದ ಮಣ್ಣಿನ ಗುಣವಾಗಿದೆ. ಸಂವಿಧಾನದಲ್ಲಿನ ಅಧಿಕಾರ ವಿಕೇಂದ್ರಿಕರಣವನ್ನು ನಾವು ಬಲವಾಗಿ ನಂಬಿದ್ದೇವೆ. ಪ್ರತಿ ನಾಗರಿಕರಿಗೆ ಸುಲಭಸಾಧ್ಯವಾಗಿ ಸರ್ಕಾರದ ಎಲ್ಲ ವ್ಯವಸ್ಥೆಗಳು ದೊರಕುಂತಾಗಲು ಪ್ರತ್ಯೇಕ ಜಿಲ್ಲೆ ರಚನೆ ಅನಿವಾರ್ಯವಾಗಿದೆ ಎಂದರು.

ನಗರ ಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕಿದೆ. ಈ ಮೊದಲೇ ಆಗಬೇಕಿತ್ತು. ಇನ್ನಾದರೂ ಈ ಹೋರಾಟಕ್ಕೆ ಬಲ ತುಂಬುವ ಮೂಲಕ ಎಲ್ಲರೂ ಭಾಗಿಯಾಗಬೇಕು ಎಂದರು. ಸಮಿತಿ ಸಂಚಾಲಕ ಎಂ.ಎಂ.ಭಟ್ಟ, ಜಿಪಂ ಮಾಜಿ ಸದಸ್ಯೆ ಶೋಭಾ ನಾಯ್ಕ , ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ವಕೀಲ ಸದಾನಂದ ಭಟ್ಟ, ಜ್ಯೋತಿ ಭಟ್ಟ, ವಿ.ಎಂ.ಭಟ್ಟ, ಮಹಾದೇವ ಚಲುವಾದಿ, ಶಿವಾನಂದ ದೇಶಳ್ಳಿ, ಅನಿಲ ನಾಯಕ, ರಮೇಶ ದುಭಾಷಿ, ರಾಘವೇಂದ್ರ ನಾಯ್ಕ, ಶ್ಯಾಮಸುಂದರ ಭಟ್ಟ, ಅನಿಲ ಕರಿ, ಮಹಾಂತೇಶ ಹಾದಿಮನೆ, ನಾಗರಾಜ ನಾಯ್ಕ, ಚಿದಾನಂದ ಹರಿಜನ, ಉದಯಕುಮಾರ ಕಾನಳ್ಳಿ, ಅಶ್ವತ್ಥ ಹೆಗಡೆ, ವಿನಾಯಕ ಭಾಗ್ವತ್, ಮಂಜುನಾಥ ಆಚಾರಿ ಮಂಜುಗುಣಿ, ಕುಮಾರ ಪಟಗಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net