

ವಿಜಯವಾಣಿ ಸುದ್ದಿಜಾಲ ಕಡಬ
ಕಡಬ, ಕೋಡಿಂಬಾಳ ಗ್ರಾಮಗಳನ್ನೊಳಗೊಂಡ ಕಡಬ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷಗಳು ಕಳೆದರೂ ಚುನಾವಣೆ ನಡೆಯದೆ ಅಧಿಕಾರಿಗಳ ಆಡಳಿತದಲ್ಲಿರುವ ಪಂಚಾಯಿತಿ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ನೀಡದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಸೂಕ್ತ ಸಿಬ್ಬಂದಿ ನೇಮಕವಾಗದೆ ಇರುವುದರಿಂದ ಸಹಜವಾಗಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.
ಕಡಬ ತಾಲೂಕು ಕೇಂದ್ರವಾಗಿ ರೂಪುಗೊಂಡ ಬಳಿಕ, ತಾಲೂಕು ಕೇಂದ್ರವಾಗಿರುವ ಕಡಬ ಪಟ್ಟಣ, ಗ್ರಾಮ ಪಂಚಾಯಿತಿಯಿಂದ ಜನಸಂಖ್ಯೆ ಆಧಾರದಲ್ಲಿ ಪಟ್ಟಣ ಪಂಚಾಯಿತಿ ಆಗಿ ರೂಪುಗೊಂಡಿದೆ. ಅಂದಿನ ಗ್ರಾ.ಪಂ ಕಟ್ಟಡದಲ್ಲಿ ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಪ್ರಾರಂಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಪಟ್ಟಣ ಪಂಚಾಯಿತಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿದಾಗ ಒಂದೆರಡು ವರ್ಷ ಕಡತಗಳನ್ನು ತಯಾರಿಸಿ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುವುದೇ ಕೆಲಸವಾಯಿತು. ಪ್ರಾರಂಭದಲ್ಲಿ ಪ್ರಭಾರ ಮುಖ್ಯಾಧಿಕಾರಿ ಕಾರ್ಯನಿರ್ವಹಿಸಿದರೆ, ಬಳಿಕ ಮುಖ್ಯಾಧಿಕಾರಿಯವರ ಹುದ್ದೆ ಭರ್ತಿ ಮಾಡಲಾಯಿತು. ಆಡಳಿತಾಧಿಕಾರಿಯಾಗಿ ಕಡಬ ತಹಸೀಲ್ದಾರ್ ಕಾರ್ಯನಿರ್ವಹಿಸುತ್ತಿದ್ಧಾರೆ. ಇನ್ನುಳಿದ ಬಹುತೇಕ ಹುದ್ದೆಗಳು ಖಾಲಿಯಾಗಿವೆ.
ಆರೋಗ್ಯ ನಿರೀಕ್ಷಕರು, ಇಂಜಿನಿಯರ್ ಹುದ್ದೆಗಳು ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿವೆ. ಒಟ್ಟು 40 ಹುದ್ದೆಗಳಿದ್ದು ಇದರಲ್ಲಿ 33 ಹುದ್ದೆಗಳು ಖಾಲಿ ಇವೆ. ಈ ಹಿಂದೆ ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ಮಂದಿ ಸಿಬ್ಬಂದಿ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರನ್ನು ನೇರ ಪಾವತಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ ನಾಲ್ಕೈದು ಸಿಬ್ಬಂದಿಯನ್ನು ಹೊರಗುತ್ತಿಗೆಯಾಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಇರುವ ಸಿಬ್ಬಂದಿ ಎಲ್ಲ ಕೆಲಸ ತಾವೇ ಮಾಡಿಕೊಂಡು ಸುಧಾರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಕಳಾರ, ಕೋಡಿಬೈಲು, ಪನ್ಯ, ಬೆದ್ರಾಜೆ, ಮಾಲೇಶ್ವರ, ಕಡಬ, ಪಣೆಮಜಲು, ಪಿಜಕಳ, ಮೂರಾಜೆ, ದೊಡ್ಡಕೊಪ್ಪ, ಕೋಡಿಂಬಾಳ, ಮಜ್ಜಾರು, ಪುಳಿಕುಕ್ಕು ಎಂಬ 13 ವಾರ್ಡುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. 2011ರ ಜನಗಣತಿ ಪ್ರಕಾರ ಎರಡು ಗ್ರಾಮಗಳಲ್ಲಿ 10500 ಜನಸಂಖ್ಯೆ ಇದೆ.
ಮುಖ್ಯವಾಗಿ ಇಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರು ವಾರದಲ್ಲಿ ಒಂದು ದಿನ ಮಾತ್ರ ಲಭ್ಯವಿರುತ್ತಾರೆ. ಆದರೆ ಅವರು ನಿದಿಷ್ಟವಾಗಿ ಯಾವ ದಿನ ಲಭ್ಯ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ತಮ್ಮ ಕಾರ್ಯಗಳಿಗೆ ಪಂಚಾಯಿತಿಗೆ ಬರುವವರು ಈ ದಿನ ತಮಗೆ ಬೇಕಾದ ಅಧಿಕಾರಿ ಲಭ್ಯವಿರಲಿ ಎಂದು ಪ್ರಾರ್ಥಿಸುವ ಅನಿವಾರ್ಯತೆ ಇದೆ.
ಪಟ್ಟಣ ಪಂಚಾಯಿತಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಆದರೆ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕಡಬಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ನಗರೋತ್ಥಾನ ಯೋಜನೆಯ ಕಾಮಗಾರಿ ಪರಿಶೀಲಿಸಿ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜತೆಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಕಾರ್ಯ ಸರಿಯಾಗಿ ನಡೆಯಲು ಸಾಧ್ಯ. ಇಲ್ಲಿ ಕೇವಲ ಅಧಿಕಾರಿಗಳೇ ಕೂತು ಅಭಿವೃದ್ಧಿ ಕಾರ್ಯ ಮಾಡಿದಾಗ ಅದು ಜನರಿಗೆ ಎಷ್ಟು ಪ್ರಯೋಜನವಾಗಬಹುದು ಎಂಬ ಪ್ರಶ್ನೆ ಮೂಡುತ್ತಿದೆ.
ಸಿಬ್ಬಂದಿ ನೇಮಕವಾಗಬೇಕಷ್ಟೆ. ಇರುವ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಿಸಿಕೊಂಡು ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತಿದ್ದೇನೆ.- ಪಕ್ರುದ್ದೀನ್ ಆಲಿಹಮ್ಮದ್ ಎನ್.ಹುಲ್ಲಿಕೇರಿಮುಖ್ಯಾಧಿಕಾರಿ, ಕಡಬ ಪಟ್ಟಣ ಪಂಚಾಯಿತಿ ಸಿಬ್ಬಂದಿ ನೇಮಕದ ಬಗ್ಗೆ ನಾನು ಈಗಾಗಲೇ ಸಂಬಂಧಪಟ್ಟ ಸಚಿವರಲ್ಲಿ ಇಲಾಖೆಯ ಅಧಿಕಾರಿಗಳಲ್ಲಿ ಮಾತನಾಡಿದ್ದೇನೆ. ಆದರೆ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಮುಂದಿನ ಅಧಿವೇಶನದಲ್ಲಿ ಪ್ರಶ್ನಿಸಿ ಉತ್ತರ ಪಡೆಯುತ್ತೇನೆ.- ಭಾಗೀರಥಿ ಮುರುಳ್ಯ, ಶಾಸಕರು https://www.vijayavani.net/shree-dharmasthala-shaurya-disaster-unit-core-comittee-meeting https://www.vijayavani.net/distribution-of-one-lakh-saplings-in-nidigal