ಕಡಬ: ಇಲ್ಲಿಗೆ ಸಮೀಪದ ಪಿಜಕಳದಲ್ಲಿ ಕುಮಾರಧಾರಾ ನದಿಗೆ ನೂತನವಾಗಿ ನಿರ್ಮಾಣವಾದ ಸರ್ವಋತು ಸೇತುವೆಯನ್ನು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇತುವೆಯಲ್ಲಿ ತೆಂಗಿನಕಾಯಿ ಒಡೆದು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.
ಬಿಜೆಪಿ ಜಿಪಂ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಚಾರ್ವಾಕ ಸಿಎ ಬ್ಯಾಂಕ್ ಅಧ್ಯಕ್ಷ ಗಣೇಶ್ ಉದನಡ್ಕ, ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಎಡಮಂಗಲ ಸಿಎ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಎಡಮಂಗಲ ಗ್ರಾಪಂ ಉಪಾಧ್ಯಕ್ಷೆ ದಿವ್ಯಾ ಯೋಗಾನಂದ, ಮಾಜಿ ಅಧ್ಯಕ್ಷೆ ಸುಮಾ ನೂಚಿಲ, ಗೀತಾ ರೈ, ಪ್ರಮುಖರಾದ ಜೋಸ್ ಕೇಂಜೂರು, ಸುಂದರ ಗೌಡ ಮಂಡೆಕರ, ಜಯಪ್ರಕಾಶ್ ಲೆಕ್ಕೆಸಿರಿಮಜಲು, ಸುರೇಶ್ ಕಲ್ಲೆಂಬಿ, ಪ್ರಕಾಶ್ ಎನ್.ಕೆ, ಜಯರಾಮ ಬಳಕ್ಕ, ಗಿರೀಶ್ ಎ.ಪಿ, ಕೃಷ್ಣ ಅಲಂಗೂರು, ಪೂವಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಸ್ವಾಗತಿಸಿ, ಪ್ರಸ್ತಾವನೆಗೈದರು. ಎಡಮಂಗಲ ಗ್ರಾಪಂ ಅಧ್ಯಕ್ಷ ರಾಮಣ್ಣ ಗೌಡ ಜಾಲ್ತಾರು ವಂದಿಸಿದರು.
ಜನರ ಅಸಮಾಧಾನ ಶಮನ
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಎಸ್.ಅಂಗಾರ ಮುತುವರ್ಜಿಯಿಂದ ಪಾಲೋಳಿಯಲ್ಲಿ ಸೇತುವೆ ನಿರ್ಮಾಣಕ್ಕೆ 19.68 ಕೋಟಿ ರೂ. ಬಿಡುಗಡೆಯಾಗಿತ್ತು. ಸೇತುವೆಯ ಉದ್ಘಾಟನೆಗೆ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರನ್ನು ಬರುವಂತೆ ಕೇಳಿಕೊಂಡಿದ್ದರೂ ಈವರೆಗೆ ದಿನ ನಿಗದಿಯಾಗಿಲ್ಲ. ಆದರೆ ಕಾಮಗಾರಿ ಮುಗಿದರೂ ವಾಹನ ಸಂಚಾರಕ್ಕೆ ಬಿಟ್ಟುಕೊಟ್ಟಿಲ್ಲ ಎನ್ನುವ ಅಸಮಾಧಾನ ಈ ಭಾಗದ ಜನರಲ್ಲಿರುವುದರಿಂದ ಸಂಚಾರಮುಕ್ತಗೊಳಿಸಲಾಗಿದೆ. ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು, ಲೋಕೋಪಯೋಗಿ ಸಚಿವರು ಹಾಗೂ ಮಾಜಿ ಸಚಿವರನ್ನು ಕರೆಸಿ ಅಧಿಕೃತ ಉದ್ಘಾಟನಾ ಸಮಾರಂಭ ಮಾಡಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.