ತಾಲೂಕಿನಾದ್ಯಂತ ಸ್ಮಶಾನ ಜಾಗ ಒತ್ತುವರಿ: ತಾಲೂಕು ಆಡಳಿತಕ್ಕೆ ತೆರವು ಕಾರ್ಯಾಚರಣೆ ಸವಾಲು

1 (1)
Published on

ಕೆ.ಆರ್.ಪೇಟೆ: ತಾಲೂಕಿನಾದ್ಯಂತ ಸ್ಮಶಾನ ಜಾಗ ಪ್ರಭಾವಿಗಳಿಂದ ಒತ್ತುವರಿಯಾಗಿದ್ದು, ತೆರವು ಕಾರ್ಯ ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ತಾಲೂಕಿನಲ್ಲಿ 318 ಗ್ರಾಮಗಳಿದ್ದು, 32 ಗ್ರಾಮಗಳಲ್ಲಿ ಜನರಿಲ್ಲದ್ದರಿಂದ ಬೇಚರಕ ಗ್ರಾಮಗಳಾಗಿವೆ. ಉಳಿಕೆ 286 ಗ್ರಾಮಗಳಲ್ಲಿ ತಲಾ ಒಂದರಂತೆ ಸ್ಮಶಾನವನ್ನು ಜಿಲ್ಲಾಡಳಿತ ಮೀಸಲಿಟ್ಟಿದ್ದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಮಶಾನದ ಜಾಗ ಉದ್ದೇಶಕ್ಕೆ ಬಳಕೆಯಾಗದೆ ಪ್ರಭಾವಿಗಳು, ಸುತ್ತಮುತ್ತಲಿನ ರೈತರು ಒತ್ತುವರಿ ಮಾಡಿ ಅನಧಿಕೃತ ತೋಟಗಳಾಗಿ ಮಾಡಿದರೆ, ಮಳೆಯಾಶ್ರಿತ ಪ್ರದೇಶದಲ್ಲಿ ಮಳೆ ಆಧಾರಿತ ಬೆಳೆಗಳಾದ ಹುರುಳಿ, ಎಳ್ಳು, ಅಲಸಂದೆ ಬೆಳೆದು ಹಲವು ವರ್ಷಗಳಿಂದ ಸ್ವಾಧೀನದಲ್ಲಿದ್ದಾರೆ.

ಹಲವೆಡೆ ಸ್ಮಶಾನವನ್ನು ಅಧಿಕಾರಿಗಳು ರಸ್ತೆ ಸಂಪರ್ಕ ಇಲ್ಲದೆ ಕಡೆ ಮೀಸಲಿಟ್ಟಿದ್ದಾರೆ. ಹಿಂದೆ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗಗಳಿಗೆ ಸರ್ವೆ ಸ್ಕೆಚ್ ಅಲಭ್ಯವಿರುವುದರಿಂದ ಸ್ಮಶಾನ ಜಾಗ ಗುರುತಿಸಿವುದು ಕಷ್ಟಸಾಧ್ಯವಾಗಿದೆ. ಪ್ರಭಾವಿಗಳು ತೆರವು ಆಗದಂತೆ ರಾಜಕಾರಣಿಗಳಿಂದ ಒತ್ತಡ ಹಾಕಿಸುತ್ತಿದ್ದಾರೆ. ಮತ್ತೊಂದೆಡೆ ಕೆಲವು ಗ್ರಾಮಗಳಲ್ಲಿ ತಮ್ಮ ಜಮೀನಿನಲ್ಲೇ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರಿಸುವುದರಿಂದಲೂ ಸ್ಮಶಾನ ಒತ್ತುವರಿ ಆಗಲು ಕಾರಣವಾಗಿದೆ. ಅಧಿಕಾರಿಗಳು ಸ್ಮಶಾನ ಜಾಗವನ್ನು ಗುರುತು ಮಾಡಿ ಹಸ್ತಾಂತರ ಮಾಡಲು ಹಲವು ಸಮಸ್ಯೆಗಳು ಎದುರಾಗಿವೆ.

ಸ್ಮಶಾನ ಮಂಜೂರು ಸಮಯದಲ್ಲಿ ಕಂದಾಯ ಇಲಾಖೆ ಸರ್ವೆ ಮಾಡಿಸಿ ಗಡಿ ಗುರುತಿಸಿ ಹದ್ದುಬಸ್ತು ಮಾಡಿ ಪಂಚಾಯಿತಿ ಪಿಡಿಒಗಳಿಗೆ ಸಮರ್ಪಕವಾಗಿ ಹಸ್ತಾಂತರ ಪ್ರಕ್ರಿಯೆ ಮಾಡಿಲ್ಲ. ಕೆಲವೆಡೆ ಹಸ್ತಾಂತರ ಮಾಡಿಕೊಂಡರೂ ಪಿಡಿಒ ಪ್ರಕ್ರಿಯೆಯಂತೆ ಮಹಜರ್, ಹಸ್ತಾಂತರ ಸ್ಕೆಚ್ ಮಾಡಿಸಿಕೊಂಡು ಮೀಸಲಿಟ್ಟ ಜಾಗ ಒತ್ತುವರಿಯಾಗದಂತೆ ತಂತಿಬೇಲಿ ನಿರ್ಮಿಸಿಕೊಂಡು ಸುರ್ಪದಿಯಲ್ಲಿ ಇರಿಸಿಕೊಂಡಿಲ್ಲ. ಹಿಂದೆ ಸ್ಮಶಾನ ಮೀಸಲಿಟ್ಟ ಜಾಗವನ್ನು ಗುರುತಿಸಿ ಹಸ್ತಾಂತರ ಮಾಡಿದರೂ ಪಿಡಿಒಗಳ ನಿರ್ವಹಣೆ ನಿರ್ಲಕ್ಷ್ಯದಿಂದ ಒತ್ತುವರಿಯಾಗಿದೆ.

ಸ್ಮಶಾನ ಜಾಗ ಹಸ್ತಾಂತರಿಸಿಕೊಳ್ಳುವಲ್ಲಿ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಿಡಿಒಗಳಲ್ಲಿ ಆಸಕ್ತಿ ಕೊರತೆ ಕಾಣುತ್ತಿದೆ. ಒತ್ತುವರಿ ತೆರವು, ಖಾಲಿ ಬಿದ್ದಿರುವ ಸ್ಮಶಾನ ಜಾಗವನ್ನು ಸರ್ವೆಯರ್ ಹದ್ದುಬಸ್ತು ಮಾಡಿ, ಗಡಿ ಗುರುತಿಸಿದ ಜಾಗದ ಟ್ರೆಂಚ್ ನಿರ್ಮಾಣಕ್ಕೆ ಪಿಡಿಒಗಳು ತಾಲೂಕು ಆಡಳಿತದಿಂದ ಅನುದಾನ ಕೇಳುತ್ತಿದ್ದಾರೆ. ತೆರವು ಕಾರ್ಯದ ಬಗ್ಗೆ ಈ ಹಿಂದೆ ತಹಸೀಲ್ದಾರ್ ಕರೆದಿದ್ದ ಸಭೆಯಲ್ಲಿ ಕೆಲವು ಪಿಡಿಒಗಳು ಗೈರಾಗಿದ್ದರು. ತಾಲೂಕು ಮಟ್ಟದ ಇಒ ಜಿಲ್ಲಾ ಮಟ್ಟದ ಸಭೆಗೆ ಪಾಲ್ಗೊಂಡಿದ್ದರು. ಅವರ ಪ್ರತಿನಿಧಿಯೂ ಬಂದಿಲ್ಲದಿರುವುದು ಗ್ರಾಪಂ, ತಾಪಂ ಅಧಿಕಾರಿಗಳಿಗೆ ಆಸಕ್ತಿ ಕೊರತೆಗೆ ಸಾಕ್ಷೀಕರಿಸುತ್ತದೆ.

ಪ್ರಭಾವಿ ವ್ಯಕ್ತಿಗಳ ಒತ್ತುವರಿದಾರರಿಂದ ಹಸ್ತಾಂತರಿಸಿಕೊಳ್ಳಲು ಪಿಡಿಒಗಳು ಹಿಂದೇಟು ಹಾಕುತ್ತಿರುವ ಆರೋಪ ಕೇಳಿ ಬರುತ್ತಿವೆ. ಇತ್ತೀಚೆಗೆ ಮೂರ‌್ನಾಲ್ಕು ವರ್ಷಗಳ ಹಿಂದೆ ಮೀಸಲಿಟ್ಟಿರುವ ಜಾಗವು ಒತ್ತುವರಿಯಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರ ವರದಿ, ತಹಸೀಲ್ದಾರ್, ಎಸಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರೆ ಜಾಗ ಸೂಕ್ತವಾಗಿರಬೇಕಿತ್ತು. ಅಂತಹ ಪ್ರಕರಣಗಳಲ್ಲೂ ಒತ್ತುವಾರಿಯಾಗಿವೆ.

ಮಂಜೂರು ಮಾಡಿದ ನಂತರ ಮೀಸಲಿಟ್ಟ ಜಾಗವನ್ನು ದುರಸ್ತು ಮಾಡಿ ಹೊಸ ಸ.ನಂ. ಕೊಡಬೇಕಿತ್ತು. ಆಗ ಅತಿಕ್ರಮದಾರರು ಮೇಲುಗೈ ಸಾಧಿಸುತ್ತಿರಲಿಲ್ಲ. ಕಂದಾಯ ಅಧಿಕಾರಿಗಳು ದುರಸ್ತುಗೆ ಸರ್ವೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಿತ್ತು. ನಂತರ ಸರ್ವೆ ದಾಖಲೆಗಳು ಸಿದ್ಧವಾಗುತ್ತಿದ್ದವು. ಈಗ ಸರ್ಕಾರಿ ಜಾಗದಲ್ಲಿ ಮೀಸಲಿಟ್ಟಿದ್ದರಿಂದ ಆ ಸ.ನಂ.ನಲ್ಲಿ ನೂರಾರು ಎಕರೆ ಜಾಗವಿದ್ದು ಅದರೊಳಗೆ ಸ್ಮಶಾನಕ್ಕೆ ಮೀಸಲಿಟ್ಟಿದೆ. ಮಂಜೂರು ಉದ್ದೇಶಕ್ಕೆ ಮಾತ್ರ ಸರ್ವೆ ಅಧಿಕಾರಿಗಳು ಸ್ಕೆಚ್ ತಯಾರಿಸಿದ್ದಾರೆ.

ಕಿಕ್ಕೇರಿ ಹೋಬಳಿಯ ಕಾರಿಗನಹಳ್ಳಿ ಗ್ರಾಮ ಮತ್ತೊಂದು ಗ್ರಾಮದಲ್ಲಿ ಒತ್ತುವರಿ ತೆರವು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ತಹಸೀಲ್ದಾರ್ ಎಂ.ವಿ.ರೂಪಾ ಒತ್ತುವರಿ ತೆರುವಿಗೆ ಮುಂದಾದಾಗ ರೈತರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟಿಸಿದ್ದರು. ರೈತರು ಅಕ್ರಮ ಸಾಗುವಳಿ ಸಕ್ರಮಿಕರಣಕ್ಕೆ ನಮೂನೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿರುವ ಜಾಗ ಸ್ಮಶಾನಕ್ಕೆ ಮೀಸಲಿಟ್ಟಿದೆ. ಒತ್ತುವರಿ ತೆರವು ಮಾಡಿದರೆ ಕೆಲವೆಡೆ ಬಡ ರೈತರ ಜಮೀನು ಹೋಗುವ ಪರಿಸ್ಥಿತಿ ಇದೆ. ಈಗಾಗಲೇ ಮೀಸಲಿಟ್ಟಿರುವ ಜಾಗವನ್ನು ಗ್ರಾಮಸ್ಥರ ಅನುಕೂಲವಾಗಿರುವ ಜಾಗಕ್ಕೆ ಮಾರ್ಪಾಡು ಮಾಡಿಕೊಡುವಂತೆ ತಾಲೂಕು ಆಡಳಿತಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಮೊದಲಿಗೆ ಸರ್ಕಾರಿ ಜಮೀನಿನಲ್ಲಿ ಗ್ರಾಮಸ್ಥರ ಅನುಕೂಲಕರ ಜಾಗವನ್ನು ಗುರುತಿಸಿ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ವರದಿ ನೀಡಬೇಕು. ತಹಸೀಲ್ದಾರ್ ಮೇಲ್ವಿಚಾರಣೆ ಮಾಡಿ ಎಸಿ ಅವರಿಗೆ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಅವರು ಡಿಸಿಗೆ ಮಂಜೂರಿಗೆ ಕೋರಬೇಕು. ಡಿಸಿ ಮಂಜೂರು ಆದೇಶದ ನಂತರ ಸ್ಮಶಾನದ ಹೆಸರಿಗೆ ಖಾತೆ ಮಾಡಿ ಆರ್‌ಟಿಸಿಗೆ ಸೇರಿಸಬೇಕು.

ತಹಸೀಲ್ದಾರ್ ನಿಸರ್ಗ ಪ್ರಿಯಾ ಪ್ರತಿಕ್ರಿಯಿಸಿ, ಸ್ಮಶಾನ ಒತ್ತುವರಿಯನ್ನು ಒತ್ತಡಕ್ಕೆ ಮಣಿಯದೆ ತೆರವುಗೊಳಿಸಲಾಗುತ್ತಿದೆ. ಹೈಕೋರ್ಟ್ ನಿರ್ದೇಶನ ಕೂಡ ಇದೆ. ಕೆಲ ಗ್ರಾಮಗಳ ಜಾಗ ಕೋರ್ಟ್‌ನಲ್ಲಿದೆ. ಅಂತಹ ಸಮಸ್ಯೆಗಳ ಹೊರತುಪಡಿಸಿ ಉಳಿದವನ್ನು ತಾಲೂಕು ಆಡಳಿತ, ಸರ್ವೆ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಜಂಟಿ ಕಾರ್ಯಾಚರಣೆ ಮಾಡಿ ಸ್ಮಶಾನ ಗುರುತಿಸಿ ಸ್ಥಳೀಯ ಸಂಸ್ಥೆ ಪಂಚಾಯಿತಿಗೆ ಹಸ್ತಾಂತರ ಮಾಡುತ್ತಿದ್ದೇವೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಪಂಚಾಯಿತಿಗೆ ನೀಡಲಾಗುತ್ತಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net