

ಪ್ರವೀಣ್‌ರಾಜ್ ಕೊಲ
ಸಮೃದ್ಧವಾಗಿ ಬೆಳೆದು ನಿಂತ ಅಡಕೆ, ಬಾಳೆ, ಹಣ್ಣಿನ ಗಿಡಗಳು, ತರಕಾರಿಗಳು ಇದೆಲ್ಲವು ಕಂಡು ಬರುವುದು ಕೊಲ ಕೆ.ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಆವರಣದೊಳಗಡೆ. ಹಚ್ಚ ಹಸಿರಿನ ವಾತವರಣದ ಶಾಲಾ ಆವರಣ ಕೃಷಿಕರ ತೋಟದಂತೆ ಕಂಗೊಳಿಸುತ್ತಿದೆ.
ಶಾಲೆಯ ಅರ್ಥಿಕತೆಯನ್ನು ಪೋಷಿಸುವ ಸಲುವಾಗಿ ಎರಡು ವರ್ಷದ ಹಿಂದೆ ಅಡಕೆ ಗಿಡ, ತೆಂಗಿನ ಗಿಡ, ಬಾಳೆ ಗಿಡಗಳ ನಾಟಿ ಮಾಡಲಾಯಿತು. ಉತ್ತಮ ಪೋಷಣೆಯಿಂದಾಗಿ ಸಮೃದ್ಧವಾಗಿ ಬೆಳೆದು ನಿಂತಿದೆ. ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಒಟ್ಟಾಗಿ ಮಾಡಿದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿ ಪುತ್ಯೆ ಮುಂದಾಳತ್ವದಲ್ಲಿ ಈ ತೋಟ 2022ರಲ್ಲಿ ಮಾಡಲಾಯಿತು. ಶಾಲಾ ಕೊಠಡಿಗಳ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಸುಮಾರು 450 ಅಡಕೆ ಸಸಿ ನಾಟಿ ಮಾಡಲಾಯಿತು. ಶಾಲಾ ಆವರಣದ ಸುತ್ತ ಸುಮಾರು 30 ತೆಂಗಿನ ಸಸಿ ನೆಡಲಾಗಿದೆ. ಅಡಕೆ ಗಿಡಗಳ ಮಧ್ಯೆ ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನೆಡಲಾಗಿದೆ. ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು, ತರಕಾರಿಗಳನ್ನು ಬೆಳೆಯಲಾಗಿದೆ. ಕೆಲವು ಬಾಳೆಗಿಡಗಳು ಗೊನೆ ಹಾಕಿವೆ. ಫಸಲನ್ನು ಶಾಲಾ ಬಿಸಿಯೂಟಕ್ಕೆ ಮಿಕ್ಕಿದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಶಾಲಾಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಶಾಲೆಯ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತದೆ. ನೀರಾವರಿಗಾಗಿ ಪೈಪುಗಳನ್ನು, ಸ್ಪಿಂಕ್ಲೆರ್‌ಗಳನ್ನು ಅಳವಡಿಸಲಾಗಿದ್ದು, ಶಾಲಾ ಅವರಣವನ್ನು ಭದ್ರಪಡಿಸಲಾಗಿದೆ.
ಗ್ರಾಮದ ಪ್ರಗತಿಪರ ಕೃಷಿಕ ರಾಮ ನಾಯ್ಕ ಏಣಿತ್ತಡ್ಕ ತನ್ನ ನರ್ಸರಿಯಿಂದ ಮಂಗಳ ತಳಿಯ ಸುಮಾರು 500 ಅಡಕೆ ಸಸಿಗಳನ್ನು ಉಚಿತವಾಗಿ ನೀಡಿದ್ದಾರೆ. ಧಾರ್ಮಿಕ ಮುಂದಾಳು ಲಿಂಗಪ್ಪ ಗೌಡ ಕಡೆಂಬ್ಯಾಲು ಧನ ಸಹಾಯದೊಂದಿಗೆ ರಸಗೊಬ್ಬರ ಉಚಿತವಾಗಿ ನೀಡಿದ್ದಾರೆ. ಉದ್ಯಮಿ ದಾಮೋದರ ಪುತ್ಯೆ ವಿದ್ಯುತ್ ಪಂಪ್‌ಶೆಡ್ ನಿರ್ಮಾಣದ ವೆಚ್ಚ, ಉದ್ಯಮಿ ಕೇಶವ ಅಮೈ ಮೆಸ್ಕಾಂ ಶುಲ್ಕವನ್ನು ಭರಿಸಿದ್ದಾರೆ. ಹಳೇವಿದ್ಯಾರ್ಥಿ ದಯಾನಂದ ಪುಣ್ಕೆತ್ತಡಿ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶುಭಾಷ್ ಶೆಟ್ಟಿ ಆರ‌್ವಾರ ಕೋಳಿ ಗೊಬ್ಬರ ಒದಗಿಸಿದ್ದಾರೆ. ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಿಂದ ಪ್ರತಿ ವರ್ಷ ಅಡಕೆ, ತೆಂಗಿನ ಬುಡಕ್ಕೆ ಸೊಪ್ಪು ಮತ್ತು ಸೆಗಣಿ ಒದಗಿಸುತ್ತಿದ್ದಾರೆ. ನಿವೃತ್ತ ಶಿಕ್ಷಕರಾದ ಗುಮ್ಮಣ್ಣ ಗೌಡ, ದುಗ್ಗಪ್ಪ ಗೌಡ ಹಣ್ಣಿನ ಗಿಡಗಳನ್ನು ನೀಡಿದ್ದಾರೆ. ಶಿಕ್ಷಣ ಪ್ರೇಮಿಗಳು, ಪಾಲಕರು ಶಾಲಾ ಶಿಕ್ಷಕರು ಕೈಲಾದಷ್ಟು ಧನ ಸಹಾಯ ನೀಡಿದ್ದಾರೆ. ಊರವರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶ್ರಮ ಸೇವೆಯಲ್ಲಿ ಪಾಲ್ಗೊಂಡು ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಎರಡು ವರ್ಷದಲ್ಲಿ ಶಾಲೆಯಲ್ಲಿ ಎರಡು ಕಾಲೇಜುಗಳ ಎನ್ನೆಸ್ಸೆಸ್ ಶಿಬಿರಗಳು ನಡೆದಿದ್ದು, ಶಿಬಿರಾರ್ಥಿಗಳು ಹೆಚ್ಚಿನ ಶ್ರಮವನ್ನು ಕೃಷಿ ತೋಟದಲ್ಲಿ ತೊಡಗಿಸಿಕೊಂಡಿದ್ದರು.
ಅಡಕೆ ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿ ವಹಿಸಿಕೊಳ್ಳಲಿದೆ. ಇದರಿಂದ ಬರುವ ಆದಾಯವನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರ ಸಂಬಳವನ್ನು ಇದರ ಆದಾಯದಿಂದ ನಿಭಾಯಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಆರಂಭದಲ್ಲಿ ಯೋಜನೆ ರೂಪಿಸುವಾಗ ಅಪಸ್ವರ ಎದ್ದಿತ್ತು. ಆದರೂ ನಿರ್ಧಾರ ಬದಲಾಯಿಸದೆ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾದಾಗ ಹಲವು ದಾನಿಗಳ ವಿವಿಧ ರೂಪದ ದಾನದಿಂದ ಯೋಜನೆ ಅನುಷ್ಠಾನಿಸಲು ಸಾಧ್ಯವಾಯಿತು. ನರೇಗಾ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲು ಅಂದಿನ ಕೊಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಹಾಗೂ ಶಿಕ್ಷಣ ಇಲಾಖಾ ಅಧಿಕಾರಿಗಳ ಪ್ರೋತ್ಸಾಹ ನಮ್ಮ ಕೆಲಸಕ್ಕೆ ಬಲ ತುಂಬಿದೆ.- ವಿಶ್ವನಾಥ (ಶಶಿ) ಪುತ್ಯೆ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ