

ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ವಿಶ್ರಾಂತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಗುರುವಾರ ಅಧಿಕಾರ ಸ್ವೀಕರಿಸಿದರು.
ಬಸವ ಸಮಿತಿ ಕಟ್ಟಡದಲ್ಲಿರುವ ಆಯೋಗದ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಶಿವಶಂಕರೇಗೌಡ, ವಿಚಾರಣೆಗೆ ಬಾಕಿಯಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ದೇಶದಲ್ಲೇ ಮೂರನೇ ಸ್ಥಾನದಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.
ಪ್ರಕರಣಗಳ ಶೀಘ್ರ ವಿಲೇವಾರಿಗೆ ಪೂರಕವಾಗಿ ಡಿಜಿಟಲ್ ಸ್ಪರ್ಶ ನೀಡಲಾಗುವುದು. ಕಕ್ಷಿದಾರರು ಹಾಗೂ ಗ್ರಾಹಕರಿಗೆ ಶೀಘ್ರ ಮತ್ತು ಪಾರದರ್ಶಕವಾಗಿ ನ್ಯಾಯ ವಿತರಣೆ ಮಾಡಲಾಗುವುದು. ರಾಜ್ಯ ಆಯೋಗ ಮತ್ತು ಜಿಲ್ಲಾ ಆಯೋಗದ ಆದೇಶಗಳನ್ನು ಆ್ಯಪ್ಗಳ ಮೂಲಕ ತಲುಪಿಸಲು ಕ್ರಮ ಕೈಗೊಳ್ಳುವುದಾಗಿ ನೂತನ ಅಧ್ಯಕ್ಷರು ಭರವಸೆ ನೀಡಿದರು.
ಆಯೋಗದ ಪ್ರಭಾರ ಅಧ್ಯಕ್ಷರಾದ ರವಿಶಂಕರ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಯೋಗದ ರಿಜಿಸ್ಟ್ರಾರ್ ಮಲ್ಲಿಕಾರ್ಜುನ ಕಮಟಗಿ, ಆಯೋಗದ ಸದಸ್ಯರುಗಳು ಉಪಸ್ಥಿತರಿದ್ದರು.
ಸಮಾರಂಭಕ್ಕೆ ಆಗಮಿಸಿದ ಸಚಿವ ಚೆಲುವರಾಯಸ್ವಾಮಿ ಹಾಗೂ ಶಾಸಕ ದಿನೇಶ್ ಗೂಳಿಗೌಡ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.