

ಕಾರ್ಕಳ: ಅನ್ಯಾಯ ಪ್ರತಿಭಟಿಸುವ ಮನೋಭಾವ ಮಹಿಳೆಯರು ಬೆಳೆಸಿಕೊಳ್ಳಬೇಕಾಗಿದೆ. ಆಗ ಮಾತ್ರ ದೌರ್ಜನ್ಯ ಹಾಗೂ ಶೋಷಣೆ ಕೊನೆಯಾಗಲು ಸಾಧ್ಯ. ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಕುಂದಾಪುರ ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ರಾಧಾದಾಸ್ ಹೇಳಿದರು.
ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಶಿಶುಪಾಲನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಬಳಿಯ ಸ್ತ್ರೀಶಕ್ತಿ ಸಭಾಭವನದಲ್ಲಿ ಸೋಮವಾರ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾರ್ಕಳ ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ಯಶೋದಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಧಾದಾಸ್ ಕುಂದಾಪುರ ಹಾಗೂ ಅಜೆಕಾರು ದಾಸಗದ್ದೆ ಅಂಗನವಾಡಿ ಕಾರ್ಯಕರ್ತೆ ಸುಲೋಚನಾ ಅವರನ್ನು ಸನ್ಮಾನಿಸಲಾಯಿತು. ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯ ನಾಯ್ಕ, ಜಿಲ್ಲಾ ಸ್ತ್ರೀಶಕ್ತಿ ಅಧ್ಯಕ್ಷೆ ಶೋಭಾ, ಮಹಿಳಾ ಮಂಡಳಿಗಳ ಒಕ್ಕೂಟ ಕಾರ್ಯದರ್ಶಿ ಅರುಂಧತಿ ಆಚಾರ್, ನಿರ್ದೇಶಕರು, ಸದಸ್ಯರು, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಹೇಮಾ ಮತ್ತಿತರರು ಉಪಸ್ಥಿತರಿದ್ದರು. ಯಶೋದಾ ಎಸ್.ಶೆಟ್ಟಿ ಸ್ವಾಗತಿಸಿ, ಜಯಂತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.