

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲು ನಿವಾಸಿ ಪಿಕಪ್ ಡ್ರೈವರ್ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 13 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದ ಇನ್ನೊಬ್ಬ ಆರೋಪಿ ಪುದು ಗ್ರಾಮದ ಕುಮ್ಡೇಲು ನಿವಾಸಿ ಭರತ್ ರಾಜ್ ಯಾನೆ ಭರತ್ ಕುಮ್ಡೇಲು ತಲೆಮರೆಸಿಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000(ಕೋಕಾ ಕಾಯ್ದೆ) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದೀಪಕ್, ಚಿಂತನ್, ಪೃಥ್ವಿರಾಜ್ ಜೋಗಿ, ಸುಮಿತ್ ಬಿ.ಆಚಾರ್ಯ, ವಿ.ರವಿರಾಜ ಮೂಲ್ಯ, ಅಭಿನ್ ರೈ, ತೇಜಾಕ್ಷ, ರವಿಸಂಜಯ್ ಜಿ.ಎಸ್., ಶಿವಪ್ರಸಾದ್ ತುಂಬೆ, ಪ್ರದೀಪ ಶಾಹಿತ್ ಯಾನೆ ಸಾಹಿತ್ ಸಚಿನ್ ಯಾನೆ ಸಚ್ಚು ರೊಟ್ಟಿಗುಡ್ಡೆ, ರಂಜಿತ್ ಬಂಧಿತ ಆರೋಪಿಗಳು.