

ಹಾಸನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏಪ್ರಿಲ್ 12 ಮತ್ತು 13ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಚ್. ವೇಣು ಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಎಂಸಿಇ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಏ.10ರ ಬೆಳಗ್ಗೆ 9 ಗಂಟೆಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನಿಧ್ಯದಲ್ಲಿ, ವಿಧಾನಸಭೆ ಸ್ಪೀಕರ ಯು.ಟಿ. ಖಾದರ್, ಸಂಸದ ಶ್ರೇಯಸ್ ಪಟೇಲ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ವಿ. ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ ಮದನ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಸಿ.ಎನ್ ಬಾಲಕೃಷ್ಣ , ಎಚ್.ಪಿ ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಏ.13ರಂದು ಸಮಾರೋಪ ಸಮಾರಂಭ ಜರುಗಲಿದ್ದು ಮಾಜಿ ಸಚಿವ ಎಚ್. ಡಿ ರೇವಣ್ಣ ಬಹುಮಾನ ವಿತರಣೆ ಮಾಡಲಿದ್ದಾರೆ .ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ವಿ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ವೇಣು ಕುಮಾರ್ ವಂದನಾ ನುಡಿಗಳನ್ನಾಡಲಿದ್ದಾರೆ ಎಂದು ಹೇಳಿದರು.
ಕ್ರಿಕೆಟ್ ಪಂದ್ಯಾವಳಿಗೆ 23 ತಂಡಗಳು ಭಾಗವಹಿಸಲಿದ್ದು 400ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಎರಡು ದಿನಗಳ ಕಾಲ ಊಟ ಹಾಗೂ ವಸತಿ ಸೌಲಭ್ಯ ಒದಗಿಸಲಾಗಿದೆ. ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದೊಂದಿಗೆ ಟ್ರೋಫಿ, ಪಂದ್ಯ ಶ್ರೇಷ್ಠ, ಉತ್ತಮ ಬ್ಯಾಟ್ಸ್ಮನ್, ಕ್ಷೇತ್ರ ರಕ್ಷಕ ಹಾಗೂ ಬೌಲರ್ಗಳಿಗೆ ಪ್ರತ್ಯೇಕ ಟ್ರೋಫಿಗಳನ್ನು ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್ ಮಂಜುನಾಥ್, ರಾಷ್ಟ್ರೀಯ ಮಂಡಳಿ ಸದಸ್ಯ ಜಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್, ಕಾರ್ಯದರ್ಶಿ ಸಿ.ಬಿ.ಸಂತೋಷ್, ಖಜಾಂಚಿ ಕುಮಾರ್ ಇದ್ದರು.