ಕ್ರಿಕೆಟ್ ಪುನರಾರಂಭದ ನಡುವೆ 2ನೇ ಬಾರಿ ಅಪ್ಪನಾದ ಸಂಭ್ರಮ ಹಂಚಿಕೊಂಡ ಜೋ ರೂಟ್

root2
Published on

ಲಂಡನ್: ಕ್ರಿಕೆಟ್ ಜನಕರ ನಾಡಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭ ಕಂಡಿರುವ ನಡುವೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್, 2ನೇ ಬಾರಿ ಅಪ್ಪನಾಗಿರುವ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಪತ್ನಿ ಕ್ಯಾರಿ ಕೋಟೆರೆಲ್ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಿಹಿಸುದ್ದಿಯನ್ನು ರೂಟ್ ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

29 ವರ್ಷದ ರೂಟ್, ಮಗುವಿನ ನಿರೀಕ್ಷೆಯೊಂದಿಗೆ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಅವರ ಗೈರಿನಲ್ಲಿ ಉಪನಾಯಕ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಂಗಾಮಿ ನಾಯಕರಾಗಿದ್ದಾರೆ. 2ನೇ ಮಗುವಿನ ಚಿತ್ರವನ್ನೂ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ರೂಟ್, 3 ವರ್ಷದ ಪುತ್ರ ಅಲ್​ಫ್ರೆಡ್​ ವಿಲಿಯಮ್ ಜತೆಗೆ ಪೋಸ್ ನೀಡಿದ್ದಾರೆ.

ರೂಟ್ 2017ರಲ್ಲಿ ಮದುವೆಗೂ ಮುನ್ನ ಮೊದಲ ಬಾರಿ ಅಪ್ಪನಾಗಿದ್ದರು. ಗೆಳತಿ ಕ್ಯಾರಿ ಕಾಟ್‌ರೆಲ್ ಜತೆಗೆ 2016ರಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು, 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರೂಟ್ ಇಂಗ್ಲೆಂಡ್ ಪರ 92 ಟೆಸ್ಟ್‌ಗಳಲ್ಲಿ 17 ಶತಕಗಳ ಸಹಿತ 7,599 ರನ್ ಗಳಿಸಿದ್ದಾರೆ. 145 ಏಕದಿನ ಪಂಧ್ಯಗಳಲ್ಲಿ 16 ಶತಕಗಳ ಸಹಿತ 5,873 ರನ್ ಬಾರಿಸಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಜುಲೈ 16ರಿಂದ ನಡೆಯಲಿರುವ 2ನೇ ಟೆಸ್ಟ್‌ಗೆ ಮುನ್ನ ಅವರು ಇಂಗ್ಲೆಂಡ್ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net