

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ವಯ ಕಾರ್ಯನಿರ್ವಹಿಸಲು ವಿವಿಧ ಜಿಲ್ಲೆಗಳಲ್ಲಿ ಸಮಾಲೋಚಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.
ಹುದ್ದೆ ಹಾಗೂ ವಿದ್ಯಾರ್ಹತೆ ವಿವರ ಇಂತಿದೆ.
* ಮಾನವ ಸಂಪನ್ಮೂಲ ಅಭಿವೃದ್ಧಿ- ಎಂಎಸ್ಡಬ್ಲ್ಯೂ/ ಎಂಎ/ ಗ್ರಾಮೀಣಾಭಿವೃದ್ಧಿ, ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
* ಮಾಹಿತಿ ಶಿಕ್ಷಣ ಹಾಗೂ ಸಂವಹನ- ಸಂವಹನದಲ್ಲಿ ಎಂ.ಎಸ್/ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
* ನೈರ್ಮಲ್ಯ ಮತ್ತು ಶುಚಿತ್ವ- ಇಂಜಿನಿಯರಿಂಗ್, ಸೋಷಿಯನ್ ಸೈನ್ಸ್ನಲ್ಲಿ ಪದವಿ ಅಥವಾ ಪಬ್ಲಿಕ್ ಹೆಲ್ತ್ನಲ್ಲಿ ಡಿಪ್ಲೊಮಾ, ಗ್ರಾಮೀಣ ನಿರ್ವಹಣೆಯಲ್ಲಿ ಪದವಿ ಅಥವಾ ಇತರ ಸಂಬಂಧಿಸಿದ ಪದವಿ ಪಡೆದಿರಬೇಕು.
* ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ- ಪರಿಸರ ಇಂಜಿನಿಯರಿಂಗ್, ಪರಿಸರ ವಿಜ್ಞಾನದಲ್ಲಿ ವಿಶೇಷತೆಯೊಂದಿಗೆ ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದಿರಬೇಕು.
* ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ- ಎಂಸಿಎ, ಎಂ.ಎ ಎಕನಾಮಿಕ್ಸ್, ಸ್ಟಾಟಿಟಿಕ್ಸ್, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್, ಬಿಇ ಕಂಪ್ಯೂಟರ್ ಸೈನ್ಸ್ ಆಗಿರಬೇಕು.
ಮೇಲಿನ ಎಲ್ಲ ಹುದ್ದೆಗಳು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. 22,000 ರೂ. ಮಾಸಿಕ ಸಂಭಾವನೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45 ವರ್ಷ.
ಆಸಕ್ತರು https://rdpr.kar.nic.in/ ನಲ್ಲಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಮೇ 11 ರೊಳಗಾಗಿ sbmkarnataka1@gmail.com ಗೆ ಕಳುಹಿಸಬೇಕು.
ಉದ್ಯೋಗಾವಕಾಶಗಳಿರುವ ಜಿಲ್ಲೆಗಳು: ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ.
ವಿವರಗಳಿಗೆ ಏಪ್ರಿಲ್ 21ರ ವಿಜಯವಾಣಿ ದಿನಪತ್ರಿಕೆಯನ್ನು ನೋಡಿ.