ವಿಐಎಸ್‌ಎಲ್ ನೌಕರರಿಗೆ ಉದ್ಯೋಗ ಸೃಷ್ಟಿ; ಕೇಂದ್ರ ಸರ್ಕಾರ, ಸೈಲ್ ಜತೆ ನಿರಂತರ ಸಂಪರ್ಕ; ಉತ್ತಮ ಫಲಿತಾಂಶದ ವಿಶ್ವಾಸ: ಸಂಸದ ಬಿ.ವೈ.ರಾಘವೇಂದ್ರ

29 smg B.Y. Raghavendra
Published on

ಭದ್ರಾವತಿ: ವಿಐಎಸ್‌ಎಲ್ ಕಾಯಂ ಮತ್ತು ಗುತ್ತಿಗೆ ನೌಕರರಿಗೆ ಉದ್ಯೋಗ ಸೃಷ್ಟಿಸುವ ಸಂಬಂಧ ಕೇಂದ್ರ ಸರ್ಕಾರ ಹಾಗೂ ಸೈಲ್ ಆಡಳಿತ ಮಂಡಳಿಯೊಂದಿಗೆ ನಿರಂತರ ಪ್ರಯತ್ನ ನಡೆಸಲಾಗುತ್ತಿದ್ದು, ಉತ್ತಮ ಫಲಿತಾಂಶ ದೊರೆಯುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಭಾನುವಾರ ವಿಐಎಸ್‌ಎಲ್ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಕಾರ್ಮಿಕರ ಭೇಟಿ ಸಂದರ್ಭದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಕಾರ್ಮಿಕರಿಗೆ ನೀಡಲಾಗುತ್ತಿದ್ದ 24 ದಿನಗಳ ಕೆಲಸದ ಬದಲಿಗೆ ಕೇವಲ 13 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ ಎಂಬುದು ನನಗೆ ತಿಳಿದಿದೆ. ಹೆಚ್ಚು ದಿನಗಳ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆ ಉತ್ಪಾದನಾ ಚಟುವಟಿಕೆ ಮತ್ತಷ್ಟು ಹೆಚ್ಚಾಗಬೇಕಿದೆ. ಅದಕ್ಕೆ ಬೇಕಾಗಿರುವ ಕಚ್ಚಾವಸ್ತುಗಳ ಸರಬರಾಜಿಗೆ ಸುಮಾರು 75 ಕೋಟಿ ರೂ. ಬಜೆಟ್ ಅವಶ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ಸಂಬಂಧ ಕಳೆದ 11 ವರ್ಷಗಳಿಂದಲೂ ಹಗ್ಗ-ಜಗ್ಗಾಟ ಪ್ರಕ್ರಿಯೆ ನಡೆಯುತ್ತಲೆ ಬರುತ್ತಿದೆ. ಕಾರ್ಖಾನೆ ಕ್ಲೋಸರ್ ಪ್ರಕ್ರಿಯೆಗೆ ಒಳಪಟ್ಟರೂ ಇದುವರೆಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತವಾಗಲು ಬಿಟ್ಟಿಲ್ಲ. ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಸಿಗುವಷ್ಟರ ಮಟ್ಟಕ್ಕಾದರೂ ಕೆಲಸ ದೊರಕಿಸಿಕೊಡಲಾಗಿದೆ. ನೀವು ನಮ್ಮ ಮೇಲಿಟ್ಟಿರುವ ನಂಬಿಕೆಗೆ ನಾನೆಂದೂ ದ್ರೋಹ ಮಾಡುವುದಿಲ್ಲ. ಕಾರ್ಖಾನೆಯನ್ನು ಶೇ.50ರ ಸಹಭಾಗಿತ್ವದಲ್ಲಿ ನಡೆಸುವ, ಇಲ್ಲವೆ ಸಂಪೂರ್ಣ ಖಾಸಗಿಯವರಿಗೆ ನೀಡುವ ಕಾರ್ಯಕ್ಕೆ ಯಾವ ಖಾಸಗಿ ಕಂಪನಿಗಳು ಮುಂದೆ ಬಾರದಿರುವುದು ನಮ್ಮ ಶ್ರಮಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಮುಂದೆ ಕಾರ್ಖಾನೆ ಅಭಿವೃದ್ಧಿಯತ್ತ ಸಾಗುವ ಸಂಪೂರ್ಣ ವಿಶ್ವಾಸ ನನಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸೈಲ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಯೂ ಇದೆ ಎಂದು ಹೇಳಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ.ಆನಂದ್, ರಾಮಲಿಂಗಯ್ಯ, ಜೆ.ಜಗದೀಶ್, ಸುರೇಶ್, ಕುಮಾರಸ್ವಾಮಿ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net