

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 24 ವಿಧಾನಸಭೆ ಕ್ಷೇತ್ರಗಳಲ್ಲಿ ಬುಧವಾರ (ಸೆ.18) ಮೊದಲ ಹಂತದ ಮತದಾನ ನಡೆಯಲಿದೆ. 24 ವಿಧಾನಸಭಾ ಕ್ಷೇತ್ರಗಳಲ್ಲಿ 23 ಲಕ್ಷ ಮತದಾರರು 90 ಪಕ್ಷೇತರರು ಸೇರಿದಂತೆ 219 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
11,76,462 ಪುರುಷರು, 11,51,058 ಮಹಿಳೆಯರು ಮತ್ತು 60 ತೃತಿಯ ಲಿಂಗಿಗಳ ಮತದಾರರನ್ನು ಒಳಗೊಂಡಂತೆ ಒಟ್ಟು 23,27,580 ಮತದಾರರು ಹಂತ 1 ರಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬುಧವಾರ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಲಿದ್ದು, ಚುನಾವಣೆ ಆಯೋಗವು ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು, ಮತದಾನದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಗಮ ಮತದಾನಕ್ಕಾಗಿ ಆಯೋಗವು 3,276 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಒಟ್ಟು 14,000 ಮತಗಟ್ಟೆ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.
ಆಗಸ್ಟ್ 2019 ರಲ್ಲಿ 370 ನೇ ವಿಧಿ ರದ್ದುಗೊಳಿಸಿದ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಇದು ಮೊದಲ ಚುನಾವಣೆಯಾಗಿದೆ. ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳ ಚುನಾವಣಾ ತಂಡಗಳು ಎಲೆಕ್ಟ್ರಾನಿಕ್ ಮತಯಂತ್ರಗಳೊಂದಿಗೆ (ಇವಿಎಂ) ತಮ್ಮ ಗೊತ್ತುಪಡಿಸಿದ ಮತಗಟ್ಟೆಗಳಿಗೆ ತೆರಳಿವೆ.
ಮೊದಲ ಹಂತದಲ್ಲಿ, ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಏಳು ಜಿಲ್ಲೆಗಳು 10 ವರ್ಷಗಳಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲಿವೆ. ಬುಧವಾರ ಮತದಾನ ನಡೆಯಲಿರುವ 24 ಸ್ಥಾನಗಳಲ್ಲಿ 8 ಜಮ್ಮು ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮತ್ತು 16 ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿವೆ.
ಕಾಂಗ್ರೆಸ್ ಮೈತ್ರಿಕೂಟ ಪಕ್ಷವಾದ ಸಿಪಿಐ (ಎಂ) ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ, ಮತ್ತು ಪಿಡಿಪಿಯ ಸರ್ತಾಜ್ ಮದ್ನಿ ಮತ್ತು ಅಬ್ದುಲ್ ರೆಹಮಾನ್ ವೀರಿ ಅವರು ಹಂತ 1 ರಲ್ಲಿ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಾಳೆ (ಸೆಪ್ಟೆಂಬರ್ 18 ರಂದು) ನಡೆಯಲಿದ್ದು ಎರಡನೇ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.