

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹಾಗೂ ಒಲಿಂಪಿಯನ್ ಕರ್ನಾಟಕದ ಅಥ್ಲೀಟ್ ಎಂಆರ್ ಪೂವಮ್ಮ ಕೇರಳದ ಅಥ್ಲೀಟ್ ಜಿತಿನ್ ಪೌಲ್ ಅವರನ್ನು ಬುಧವಾರ ವಿವಾಹವಾಗಲಿದ್ದಾರೆ. ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಬಳಿಕ ಜನವರಿ 1 ರಂದು ಕೇರಳದ ತ್ರಿಶೂರ್‌ನಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯಲಿದೆ.
ಪೂವಮ್ಮ-ಜಿತಿನ್ ಕ್ರೀಡಾ ದಂಪತಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಪೂವಮ್ಮ-ಜಿತಿನ್ ದೀರ್ಘಕಾಲದಿಂದ ಸ್ನೇಹಿತರಾಗಿದ್ದರು.
ಕೊಡಗು ಮೂಲದ 31 ವರ್ಷದ ಪೂವಮ್ಮ 2014ರ ಇಂಚೋನ್ ಏಷ್ಯಾಡ್‌ನಲ್ಲಿ 1 ಚಿನ್ನ, 1 ಕಂಚು ಮತ್ತು 2018ರ ಜಕಾರ್ತ ಏಷ್ಯಾಡ್‌ನಲ್ಲಿ 2 ಚಿನ್ನ ಜಯಿಸಿದ್ದರು. 2008ರ ಬೀಜಿಂಗ್ ಮತ್ತು 2016ರ ರಿಯೋ ಒಲಿಂಪಿಕ್ಸ್ ರಿಲೇ ತಂಡದ ಭಾಗವಾಗಿದ್ದರು. ಗಾಯದಿಂದಾಗಿ 2021ರ ಟೋಕಿಯೊ ಒಲಿಂಪಿಕ್ಸ್ ತಪ್ಪಿಸಿಕೊಂಡಿದ್ದರು. 2015ರಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು ಮಂಗಳೂರು ಒಎನ್‌ಜಿಸಿ ಉದ್ಯೋಗಿಯಾಗಿದ್ದಾರೆ.
ಪುಣೆಯಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿರುವ ಜಿತಿನ್ ಪೌಲ್ ಕೂಡ ಏಷ್ಯಾಡ್-ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ ಸ್ಪರ್ಧಿಸಿದ್ದಾರೆ.