ಜಾಹ್ನವಿ ಆಯ್ತು, ಈಗ ಆಕೆಯ ತಂಗಿಯೂ ಬಣ್ಣ ಹಚ್ಚಲು ರೆಡಿ

Khushi Kapoor - Final
Published on

ಮುಂಬೈ: ಶ್ರೀದೇವಿ ಮತ್ತು ಬೋನಿ ಕಪೂರ್​ ಅವರ ಮುದ್ದಿನ ಮಗಳು ಜಾಹ್ನವಿ ಕಪೂರ್​ 'ಡಢಕ್​' ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟು, ಆ ನಂತರ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈಗ ಜಾಹ್ನವಿ ತಂಗಿ ಖುಷಿ ಕಪೂರ್​ ಸಹ ಬಣ್ಣ ಹಚ್ಚುವುದಕ್ಕೆ ತಯಾರಿ ನಡೆಸಿದ್ದಾರೆ.

ಹೌದು, ಜಾಹ್ನವಿ ತಂಗಿ ಖುಷಿ ಕಪೂರ್​ ಸಹ ಬಾಲಿವುಡ್​ಗೆ ಸದ್ಯದಲ್ಲೇ ಎಂಟ್ರಿ ಕೊಡಲಿದ್ದಾರಂತೆ. ಹಾಗಂತ ಅವರ ತಂದೆ ಮತ್ತು ಜನಪ್ರಿಯ ನಿರ್ಮಾಪಕ ಬೋನಿ ಕಪೂರ್​ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಖುಷಿಗೂ ನಟಿಸುವ ಆಸಕ್ತಿ ಇದೆ. ಸದ್ಯದಲ್ಲೇ ಆಕೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾಳೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಹೊರಬೀಳಲಿದೆ' ಎಂದು ಹೇಳಿಕೊಂಡಿದ್ದಾರೆ.

ಸ್ವತಃ ತಾವೇ ಜನಪ್ರಿಯ ನಿರ್ಮಾಪಕರಾಗಿದ್ದರೂ, ಮಗಳನ್ನು ಪರಿಚಯಿಸುತ್ತಿಲ್ಲ, ಆ ಕೆಲಸವನ್ನು ಬೇರೊಬ್ಬ ನಿರ್ಮಾಪಕರು ಮಾಡಲಿದ್ದಾರೆ ಎಂದು ಬೋನಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಖುಷಿಯನ್ನು ನಾನೇ ಚಿತ್ರರಂಗಕ್ಕೆ ಪರಿಚಯಿಸಬಹುದು. ಆದರೆ, ನನ್ನ ಸ್ನೇಹಿತರೊಬ್ಬರು ಖುಷಿಯನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಉತ್ಸುಕರಾಗಿದ್ದಾರೆ' ಎಂದು ಹೇಳಿದ್ದಾರೆ.

ಈ ಹಿಂದೆ ಜಾಹ್ನವಿಯನ್ನು ಕರಣ್​ ಜೋಹರ್​ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಈಗ ಖುಷಿಯನ್ನು ಯಾರು ಪರಿಚಯಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net