

ಹೈದರಾಬಾದ್: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ ಮಹಿಳೆಯೋರ್ವಳ ಒಡವೆಗಳೆಲ್ಲ ನಾಪತ್ತೆಯಾಗಿವೆ.
ಆಕೆಯ ಮೂಗಿನ ನತ್ತು, ಕಿವಿಯ ಓಲೆ, ಉಂಗುರ, ಚೈನ್ಗಳು ಕಾಣೆಯಾಗಿವೆ. ನತ್ತು ಹಾಗೂ ಕಿವಿಯ ಓಲೆಗಳು ವಜ್ರದ್ದಾಗಿದ್ದವು ಎಂದು ಕುಟುಂಬದವರು ತಿಳಿಸಿದ್ದಾರೆ. ಬಂಜಾರಾ ಹಿಲ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆಯ ಮೈಮೇಲೆ ಇದ್ದ ಒಡವೆಗಳ ಒಟ್ಟು ಬೆಲೆ ಅಂದಾಜು 5 ಲಕ್ಷ ರೂ. ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ ಬದಲಿಸಿದರೆ ಬಿಜೆಪಿ ಅಸ್ತಿತ್ವಕ್ಕೆ ಧಕ್ಕೆ ; ಬೀದಿಗಿಳಿದು ಹೋರಾಟ ಮಾಡುವುದಾಗಿ ಮಠಾಧೀಶರ ಎಚ್ಚರಿಕೆ
ಒಡವೆಗಳು ಕಾಣೆಯಾದ ಬಗ್ಗೆ ಮಹಿಳೆಯ ಮಗ ಎಂ. ಪ್ರಕಾಶ್ ಅವರು ದೂರು ನೀಡಿದ್ದರು. ಕೊವಿಡ್-19 ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ನೋಡಿದರೆ ಅವರ ಮೈಮೇಲೆ ಇದ್ದ ಒಡವೆಗಳು ಒಂದೂ ಇರಲಿಲ್ಲ. ಅವರಿಗೆ ಸಂಬಂಧಪಟ್ಟ ಉಳಿದ ವಸ್ತುಗಳನ್ನೆಲ್ಲ ನಮಗೆ ಒಪ್ಪಿಸಿದ್ದಾರೆ. ಆದರೆ ಮೂಗಿನ ನತ್ತು, ಕಿವಿಯೋಲೆಗಳು, ಚೈನ್, ಉಂಗುರಗಳನ್ನು ಕೊಡಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪೊಲೀಸರು ಆಸ್ಪತ್ರೆ ಸಿಬ್ಬಂದಿಯ ಬಳಿ ಕೇಳಿದ್ದಕ್ಕೆ, ನಾವು ಚಿಕಿತ್ಸೆ ಶುರು ಮಾಡುವ ಮೊದಲೇ ಎಲ್ಲವನ್ನೂ ಅವರ ಕುಟುಂಬದವರಿಗೆ ಕೊಟ್ಟಿದ್ದೇವೆ ಎಂದು ಉತ್ತರಿಸಿದ್ದಾರೆ.
ಹಾಗೇ, ಸಿಸಿಟಿವಿ ಫೂಟೇಜ್ಗಳನ್ನು ನೋಡಿದರೂ ನಮಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಕುಟುಂಬದವರನ್ನು ಕೇಳಿದರೆ ನಮಗೆ ಕೊಡಲಿಲ್ಲ ಎನ್ನುತ್ತಾರೆ. ಆಸ್ಪತ್ರೆಯವರನ್ನು ಕೇಳಿದರೆ ನಾವು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)