ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ನಗರದ ಡಿವೈಎಸ್ಪಿ ಕಚೇರಿ ಬಳಿ ಇರುವ ಸೌಂದರ್ಯ ಫ್ಯಾಷನ್ ಶೋ ರೂಂಗೆ ಬುರ್ಖಾ ಧರಿಸಿ ಬಂದಿದ್ದ ಮಹಿಳೆಯರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.ಈ ಅಂಗಡಿಯಲ್ಲಿ ಬಟ್ಟೆ ಮತ್ತು ಚಿನ್ನಾಭರಣ ವ್ಯಾಪಾರ ಮಾಡಲಾಗುತ್ತದೆ. ಭಾನುವಾರ ಮಧ್ಯಾಹ್ನ ಬುರ್ಖಾ ಧರಿಸಿ ಐದಾರು ಮಹಿಳೆಯರು ಶೋ ರೂಂ ಪ್ರವೇಶಿಸಿದ್ದಾರೆ. ಬ್ಲೌಸ್ ಪೀಸ್ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದ ಐವರ ಪೈಕಿ ಕೆಲವರು ಬ್ಲೌಸ್ಪೀಸ್ ಪರಿಶೀಲಿಸುತ್ತಿದ್ದರೆ, ಹಿಂಬದಿ ನಿಂತಿದ್ದ ಮಹಿಳೆ ಅಂಗಡಿಯ ಶೋಕೇಸ್ನಲ್ಲಿದ್ದ ಸುಮಾರು 160 ಗ್ರಾಂ ತೂಕದ ಚಿನ್ನದ ಓಲೆಗಳಿದ್ದ ಬಾಕ್ಸ್ ಎತ್ತಿಕೊಂಡು ಬಟ್ಟೆಯೊಳಗೆ ಸೇರಿಸಿಕೊಂಡು ಅಂಗಡಿಯಿಂದ ತೆರಳಿದ್ದಾಳೆ.
ಅಂಗಡಿ ಮಾಲೀಕ ರಾಜೇಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜೆ ಚಿಕ್ಕಬಳ್ಳಾಪುರದಿಂದ ಬೆರಳಚ್ಚು ತಜ್ಞರು ಬಂದು ತಪಾಸಣೆ ನಡೆಸಿದರು.
ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ: ಓಲೆ ಬಾಕ್ಸ್ ಕದ್ದು ಮಹಿಳೆ ತೆರಳಿದ ನಂತರ, ಉಳಿದ ಮಹಿಳೆಯರ ಪೈಕಿ ಓರ್ವ ಮಹಿಳೆ ಕಾಟಾಚಾರಕ್ಕೆ ಎನ್ನುವಂತೆ 2 ಬ್ಲೌಸ್ಪೀಸ್ ಖರೀದಿಸಿದ್ದಾಳೆ. ನಂತರ ಅನುಮಾನಗೊಂಡ ಅಂಗಡಿ ಮಾಲೀಕ ಅಂಗಡಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಮಹಿಳೆ ಓಲೆಗಳಿದ್ದ ಬಾಕ್ಸ್ ಕಳವು ಮಾಡಿರುವ ದೃಶ್ಯ ಸೆರೆಯಾಗಿದೆ.
ಅಪಘಾತದಲ್ಲಿ ನಿವೃತ್ತ ಆರೋಗ್ಯ ನಿರೀಕ್ಷಕ ಸಾವು
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಬಾಗೇಪಲ್ಲಿ ರಸ್ತೆಯ ಮಹಮದ್ಪುರ ಗೇಟ್ ಬಳಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೂಲತಃ ಕೋಲಾರ ಜಿಲ್ಲೆ ಮುಳಬಾಗಿಲಿನ ನಿವಾಸಿ, ನಗರದಲ್ಲಿ ವಾಸವಿದ್ದ ವೆಂಕಟರವಣಪ್ಪ (66) ಮೃತ. ವೃತ್ತಿಯಲ್ಲಿ ಆರೋಗ್ಯ ನಿರೀಕ್ಷಕರಾಗಿದ್ದು, 6 ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದರು. ಸಂಸಾರ ಸಮೇತ ಚಿಂತಾಮಣಿಯಲ್ಲಿ ವಾಸಿಸುತ್ತಿದ್ದರು.
ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದ ಬಳಿ ವೆಂಕಟರವಣಪ್ಪ ಅವರಿಗೆ ಜಮೀನಿದ್ದು, ಪ್ರತಿದಿನ ಬೈಕಿನಲ್ಲಿ ಜಮೀನಿಗೆ ಹೋಗಿ ಸಂಜೆ ವಾಪಸಾಗುತ್ತಿದ್ದರು. ಸೋಮವಾರ ಬೆಳಗ್ಗೆ ಗಂಜಿಗುಂಟೆಗೆ ಹೋಗುತ್ತಿದ್ದಾಗ ಬಾಗೇಪಲ್ಲಿಯಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಗುಂಡಿಗೆ ಉರುಳಿದೆ. ಆಂಧ್ರಪ್ರದೇಶದ ತಾಡಪತ್ರಿಯ ನಿವಾಸಿ ಕಾರು ಮಾಲೀಕ ಆಂಜನೇಯಲು ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಪಿ.ಮುರಳೀಧರ್, ಚಿಂತಾಮಣಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವರಾಜ್ ಮತ್ತು ಸಿಬ್ಬಂದಿ ಭೇಟಿ ಪರಿಶೀಲಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಲ್ಮೀಕಿ ನಿಗಮದ ಹಗರಣ: ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣಕ್ಕೆ ಸಂಸದ ಬೊಮ್ಮಾಯಿ ಆಗ್ರಹ