'ವಿದೂಷಕ' ವೀರ್​ ದಾಸ್​ಗೆ ನಮ್ಮ ರಾಜ್ಯಕ್ಕೆ ಪ್ರವೇಶವಿಲ್ಲ​ ಎಂದ ಗೃಹ ಸಚಿವ

vir
Published on

ಭೋಪಾಲ್: ಸ್ಟಾಂಡ್​ಅಪ್​ ಕಾಮೆಡಿಯನ್ ವೀರ್​ ದಾಸ್​​ರ ಭಾರತದ ಬಗೆಗಿನ ಭಾಷಣದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸ್​ ಕಂಪ್ಲೆಂಟುಗಳು ದಾಖಲಾಗಿವೆ. ಇದೀಗ ಅಮೆರಿಕ ಟೂರ್​ ನಡೆಸುತ್ತಿರುವ ದಾಸ್​ಗೆ ಮಧ್ಯಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ.

ಮುಂಬೈ ಮೂಲದ ದಾಸ್​ ಭಾರತದ ಪ್ರಸ್ತುತ ವಿಚಾರಗಳ ಕುರಿತಾಗಿ ಅಮೆರಿಕದ ಜೆಎಫ್​ ಕೆನೆಡಿ ಸೆಂಟರ್​ನಲ್ಲಿ ಮಾಡಿದ್ದ ತಮ್ಮ ಭಾಷಣದ ವಿಡಿಯೋ ತುಣುಕನ್ನು ಯೂಟ್ಯೂಬ್​ನಲ್ಲಿ ಶೇರ್​ ಮಾಡಿದ್ದರು. ಅದನ್ನು ವಿಡಂಬನೆ ಎಂದು ಅವರು ಹೇಳಿಕೊಂಡಿದ್ದರೂ, ದೇಶದ ಬಗ್ಗೆ ವಿದೇಶಕ್ಕೆ ಹೋಗಿ ಕೆಟ್ಟದಾಗಿ ಮಾತನಾಡಿರುವ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್​ ಮಿಶ್ರ, “ಭಾರತಕ್ಕೆ ಅವಮಾನ ಮಾಡುವ ಇಂಥವರನ್ನು ನಾನು ವಿದೂಷಕರೆಂದು ಕರೆಯುತ್ತೇನೆ. ಇವರಿಗೆ ರಾಜ್ಯದಲ್ಲಿ ಪ್ರದರ್ಶನ ನೀಡಲು ಅವಕಾಶ ಕೊಡುವುದಿಲ್ಲ. ಕ್ಷಮಾಪಣೆ ಕೇಳಿದರೆ, ಅದರ ಬಗ್ಗೆ ಮತ್ತೆ ಯೋಚಿಸುತ್ತೇವೆ" ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಮತ್ತೊಂದೆಡೆ, ತಮಗೆ ದೇಶಕ್ಕೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿಕೊಂಡಿರುವ ವೀರ್​ ದಾಸ್​​ಗೆ ಟಿಎಂಸಿ ಸದಸ್ಯ ಮಹುವಾ ಮೋಯಿತ್ರ, ಕಾಂಗ್ರೆಸ್​ ನಾಯಕರಾದ ಕಪಿಲ್​ ಸಿಬಾಲ್ ಮತ್ತು ಶಶಿ ತರೂರ್​ ಮುಂತಾದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net