

ತಾವರಗೇರಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸ್ಥಳೀಯ ಜೆಸ್ಕಾಂ ಉಪವಿಭಾಗ ಕಚೇರಿಯ ಸಿಬ್ಬಂದಿ ಬುಧವಾರ ಕಚೇಯ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು. ಸಮರ್ಪಕ ಸಿಬ್ಬಂದಿ ಇರದ ಕಾರಣ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಆಗತ್ತಿಲ್ಲ. ಯಾವುದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಲಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಸ್ಥಳಕ್ಕೆ ಕುಷ್ಟಗಿ ಎಇಇ ದಾವಲ್‌ಸಾಬ್ ಭೇಟಿ ನೀಡಿ ಸಿಬ್ಬಂದಿಯ ಅಹವಾಲು ಆಲಿಸಿದರು. ಕೆಇಬಿಯಲ್ಲಿ 11 ಲೈನ್‌ಮನ್‌ಗಳು ಇರಬೇಕಿತ್ತು. ಆದರೆ, ಪ್ರಸ್ತುತ 7 ಮಂದಿ ಇದ್ದಾರೆ. ಸಿಬ್ಬಂದಿ ಕೊರತೆಯಿಂದ ತಾವರಗೇರಾ ಹೋಬಳಿ ವ್ಯಾಪ್ತಿಯ 46 ಹಳ್ಳಿಗಳಲ್ಲಿ ವಿದ್ಯುತ್ ನಿರ್ವಹಣೆ ಮಾಡಲಾಗುತ್ತಿಲ್ಲ. ಇತ್ತೀಚೆಗೆ ಕಳಮಳ್ಳಿ ತಾಂಡಾದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದು 11 ಜಾನುವಾರುಗಳು ಅಸು ನೀಗಿದ್ದವು ಎಂದು ಸೆಕ್ಷನ್ ಅಧಿಕಾರಿ ರಶ್ಮಿ ಚವ್ಹಾಣ ವಿವರಿಸಿದರು.
ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ತೋಟಗಾರಿಕಾ ರೈತರು ಸಹ ಸೆಕ್ಷನ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಮ್ಮ ಭಾಗಕ್ಕೆ ವಿದ್ಯುತ್ ಸರಬರಾಜು ಅಸಮರ್ಪಕವಾಗಿದೆ. ವೋಲ್ಟೇಜ್ ಕೂಡ ಸರಿಯಾಗಿಲ್ಲ ದೂರಿದರು.
ದೂರು ಆಲಿಸಿದ ಎಇಇ, ಇನ್ನೆರಡು ದಿನಗಳಲ್ಲಿ ಮೂವರು ಲೈನ್‌ಮನ್‌ಗಳನ್ನು ನಿಯೋಜಿಸಲಾಗುವುದೆಂದು ಭರವಸೆ ನೀಡಿದರು. ತಾವರಗೇರಾ ಪಟ್ಟಣಕ್ಕೆ 110 ಕೆವಿ ಸ್ಟೇಷನ್ ಇದ್ದು, ಸುತ್ತಲೂ ಮೊದಲಿಗಿಂತ ಪಂಪ್‌ಸೆಟ್‌ಗಳು ಈಗ ಹೆಚ್ಚಾಗಿವೆ. ಇನ್ನೂ ಮೂರು 110 ಕೆವಿ ಸ್ಟೇಷನ್‌ಗಳಾದರೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತದೆ ಎಂದು ತಿಳಿಸಿದರು.
ರೈತರಾದ ಚಂದ್ರು, ಸಂತೋಷ ಸರನಾಡಗೌಡ, ಸಾಗರಬೇರಿ, ಶ್ಯಾಮಣ್ಣ ಸುಣಗಾರ, ಚನ್ನಪ್ಪ ನಾಲತವಾಡ, ಸಿದ್ದನಗೌಡ, ಸಂಜೀವ ಚಲುವಾದಿ ಇತರರಿದ್ದರು.