ಅರುಣಾಚಲದಲ್ಲಿ ಜೆಡಿಯುಗೆ ಆಘಾತ: ಬಿಜೆಪಿ ಸೇರಿದ್ರು ಆರು ಶಾಸಕರು

Nitish Kumar
Published on

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಸಂಯುಕ್ತ ಜನತಾದಳ (ಜೆಡಿಯು)ಗೆ ಆಘಾತ ನೀಡಿರುವ ಆರು ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶದ ಏಕೈಕ ಶಾಸಕ ಲಿಕಬಲಿ ಕ್ಷೇತ್ರದ ಪ್ರತಿನಿಧಿ ಕರ್ದೋ ನ್ಯಿಗ್ಯೋರ್​ ಕೂಡ ಬಿಜೆಪಿ ಸೇರಿದ್ದಾರೆ.

ಹೀಗಿತ್ತು-ಹೀಗಾಯ್ತು.. ಕಳೆದ ವರ್ಷ ವಿಧಾನಸಭೆ ಚುನಾವಣೆ ನಡೆದ ವೇಳೆ ಬಿಜೆಪಿ 41 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಜೆಡಿಯು 15 ಸ್ಥಾನಗಳಲ್ಲಿ ಸ್ಪರ್ಧಿಸಿ 7ರಲ್ಲಿ ಗೆಲುವು ದಾಖಲಿಸಿತ್ತು. ಈಗ ಜೆಡಿಯುನ ಆರು ಶಾಸಕರು ಮತ್ತು ಪಿಪಿಎಯ ಒಬ್ಬ ಶಾಸಕ ಬಿಜೆಪಿ ಸೇರಿದ ಕಾರಣ ಬಿಜೆಪಿ ಸದಸ್ಯ ಬಲ 48ಕ್ಕೆ ಏರಿಕೆಯಾಗಿದೆ. ಇನ್ನುಳಿದಂತೆ ಕಾಂಗ್ರೆಸ್ ಮತ್ತು ಎನ್​ಪಿಪಿ ತಲಾ 4 ಸದಸ್ಯರನ್ನು ಹೊಂದಿದೆ. ಜೆಡಿಯುವಿನ ಸದಸ್ಯ ಬಲ ಒಂದಕ್ಕೆ ಇಳಿದಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗುವ ಒಂದು ದಿನದ ಮೊದಲು ಈ ಬೆಳವಣಿಗೆ ನಡೆದಿದ್ದು, ರಾಜಕೀಯವಾಗಿ ಜೆಡಿಯುಗೆ ಶಾಕ್ ನೀಡಿದೆ. ರಮ್​ಗೊಂಗ್ ಕ್ಷೇತ್ರದ ತಲೇಮ್​ ತಬೋಹ್​, ಚಾಯಾಂಗ್ ತಜೋ ಕ್ಷೇಥ್ರದ ಹಯೇಂಗ್ ಮಾಂಗ್ಫಿ, ತಾಲಿಯ ಜಿಕ್ಕೆ ಟಕೋ, ಕಲಾಕಟಂಗ್​ ಕ್ಷೇತ್ರದ ಡೋರ್ಜಿ ವಾಂಗ್ಡಿ ಖರ್ಮಾ, ಬೊಮ್ಡಿಲಾ ಕ್ಷೇತ್ರದ ಡೊಂಗ್ರು ಸಿಯೋಂಗ್ಜು, ಮರಿಯಾಂಗ್ -ಗೆಕು ಕ್ಷೇತ್ರದ ಕನ್​​ಗಾಂಗ್​ ಟಕು ಬಿಜೆಪಿ ಸೇರಿದ ಜೆಡಿಯು ಶಾಸಕರು.

ನವೆಂಬರ್ 26ರಂದು ಮೂವರು ಶಾಸಕರಿಗೆ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಜೆಡಿಯು ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಅಷ್ಟೇ ಅಲ್ಲ, ಅವರನ್ನು ಅಮಾನತುಗೊಳಿಸಿತ್ತು. ಇದರ ಬೆನ್ನಿಗೆ ನಡೆದ ಬೆಳವಣಿಗೆ ಇದಾಗಿದ್ದು, ಪಕ್ಷದ ವರಿಷ್ಠರ ಗಮನಕ್ಕೆ ತಡವಾಗಿ ಬಂದಿದೆ ಎಂದು ಹೇಳಲಾಗುತ್ತಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶದ ಏಕೈಕ ಶಾಸಕ ಕರ್ದೋ ನ್ಯಿಗ್ಯೋರ್​ ಕೂಡ ಪಕ್ಷದಿಂದ ಕಳೆದ ತಿಂಗಳು ಅಮಾನತುಗೊಂಡಿದ್ದರು. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net