ಜೆಡಿಎಸ್ ನಾಯಕರು ಮಕ್ಕಳು, ಮೊಮ್ಮಕ್ಕಳಿಗಾಗಿ ಮತ ಕೇಳುತ್ತಿದ್ದಾರೆ: DK Suresh

DK Suresh
Published on

ಬೆಂಗಳೂರು: ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ. ಜೆಡಿಎಸ್ ಅವರು ಮಕ್ಕಳು, ಮೊಮ್ಮಕ್ಕಳಿಗಾಗಿ ಮತ ಕೇಳುತ್ತಿದ್ದಾರೆ. ತಮ್ಮ ಕುಟುಂಬದ ಅಳಿವು ಉಳಿವಿಗಾಗಿ ಮತ ಕೇಳುತ್ತಿದ್ದಾರೆ. ನಾವು ಚನ್ನಪಟ್ಟಣದ ಅಭಿವೃದ್ಧಿಗೆ ಮತ ಕೇಳುತ್ತಿದ್ದೇವೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್(DK Suresh) ಹೇಳಿದರು.

ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಸೋಮವಾರ(ನ.11) ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

"ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪ್ರತಿ ದಿನ ಹೋರಾಟ ಮಾಡುವುದು ಡಿ.ಕೆ.ಶಿವಕುಮಾರ್ ಸ್ವಭಾವಿಕ ಗುಣ. ಯಾರೇ ಅಭ್ಯರ್ಥಿಯಾದರು ಸಹ ಈ ಜಿಲ್ಲೆಯ ಮಗನಾಗಿ, ಉಪಮುಖ್ಯಮಂತ್ರಿಯಾಗಿ ಅವರು ಜನರ ಸೇವೆಗೆ ಬದ್ಧವಾಗಿದ್ದಾರೆ" ಎಂದರು.

''ಡಿ.ಕೆ ಸಹೋದರರು ಅಪೂರ್ವ ಸಹೋದರರು ಎಂದು ದೇವೇಗೌಡರು ಮಾಡಿರುವ ಲೇವಡಿ ಬಗ್ಗೆ ಕೇಳಿದಾಗ, ಅಪೂರ್ವ ಮಕ್ಕಳು, ಮೊಮ್ಮಕ್ಕಳು, ಅಪೂರ್ವ ಕುಮಾರಸ್ವಾಮಿ ಕುಟುಂಬ, ಎಚ್ ಡಿಕೆ ಕುಟುಂಬ, ದೇವೇಗೌಡರ ಕುಟುಂಬ ಎಂದು ನಾವು ಹೇಳುವುದಾ? ನಾವು ಅಪೂರ್ವ ಸಹೋದರರೇ. ದೇವೇಗೌಡರ ಮೊಮ್ಮಕ್ಕಳ ಬಗ್ಗೆ ಎಳೆ, ಎಳೆಯಾಗಿ ಬಿಡಿಸಿ ಹೇಳಿದರೆ ಅವರಿಗೆ ನೋವಾಗುತ್ತದೆ. ತೀಕ್ಷವಾಗಿ ಮಾತನಾಡದೆ ಅವರ ವಯಸ್ಸಿಗೆ ಗೌರವ ಕೊಟ್ಟು ನಾವು ಮಾತನಾಡುತ್ತಿಲ್ಲ" ಎಂದರು.

ಗ್ಯಾರಂಟಿಯಿಂದ HD ಕುಟುಂಬಕ್ಕೆ ಹೊಟ್ಟೆ ಉರಿ

ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿಗಳನ್ನು ಸರ್ಕಾರ ನಿಲ್ಲಿಸುತ್ತದೆ ಎನ್ನುವ ಜೆಡಿಎಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ದೇವೇಗೌಡರು, ಕುಮಾರಸ್ವಾಮಿಗೆ ಗ್ಯಾರಂಟಿ ಯೋಜನೆಗಳಿಂದ ಕಸಿವಿಸಿಯಾಗಿದೆ. ಅವರಿಗೆ ಗ್ಯಾರಂಟಿಗಳು ಬೇಡ ಎನ್ನಿಸಿದ್ದರೆ ನೇರವಾಗಿ ಗ್ಯಾರಂಟಿಗಳನ್ನು ನಿಲ್ಲಿಸಲಿ ಎಂದು ಜನರ ಮುಂದೆ ಹೇಳಲಿ. ಈಗಾಗಲೇ ಅನೇಕ ಬಾರಿ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ, ಡಿಸಿಎಂ ಸೇರಿ ಪಕ್ಷದ ರಾಷ್ಟೀಯ ಅಧ್ಯಕ್ಷರು, ರಾಹುಲ್ ಗಾಂಧಿ ಕೂಡ ಸ್ಪಷ್ಟ ಪಡಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ಸುಳ್ಳು ಹೇಳಬಾರದು

ಕರ್ನಾಟಕದ ಭ್ರಷ್ಟಾಚಾರದ ಹಣವನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎನ್ನುವ ಪ್ರಧಾನಿಗಳ ಆರೋಪದ ಬಗ್ಗೆ ಕೇಳಿದಾಗ "ಪ್ರಧಾನಿ ಮೋದಿ ಉನ್ನತ ಸ್ಥಾನದಲ್ಲಿ ಇರುವ ವ್ಯಕ್ತಿ. ಅವರು ಹೀಗೆ ಸುಳ್ಳು ಹೇಳಬಾರದು. ಜತೆಗೆ ಎಲ್ಲಾ ಏಜೆನ್ಸಿಗಳು ಅವರ ಕೈಯಲ್ಲಿ ಇರುವ ಕಾರಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ಆರೋಪವನ್ನು ಸ್ಪಷ್ಟಪಡಿಸಲಿ. ಕೇವಲ ಮಹಾರಾಷ್ಟ್ರ ಚುನಾವಣೆಗಾಗಿ ಪ್ರಧಾನಿಗಳಿಂದ ಈ ರೀತಿಯ ಆರೋಪವನ್ನು ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ನಾಲ್ಕುವರೇ ವರ್ಷಗಳ ಕಾಲ ಅವರೇ ಪ್ರಧಾನಿಗಳಾಗಿ ಇರುತ್ತಾರೆ. ಅವರು ಇಂತಹ ರಾಜಕೀಯ ಹೇಳಿಕೆ ನೀಡುವುದು ಶೋಭೆಯಲ್ಲ ಎಂದರು.

ಚನ್ನಪಟ್ಟಣದಲ್ಲಿ ಮುಸ್ಲಿಂ ಮತದಾರರನ್ನು ದಳದಿಂದ ಸೆಳೆಯುವ ಯತ್ನವಾಗುತ್ತಿದೆ ಎಂಬ ಪ್ರಶ್ನೆಗೆ, ದೇವೇಗೌಡರು ಇಳಿವಯಸ್ಸಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯವಾಗಿ ಉತ್ತರ ಕೊಡುತ್ತೇವೆ. ಅವರು ಯಾರ ಬಳಿ ಬೇಕಾದರೂ ಹೋಗಲಿ. ಅವರು ಈ ಹಿಂದೆ ಏನೇನು ಮಾತನಾಡಿದ್ದಾರೆ ಎಂದು ಮಾಧ್ಯಮದವರೇ ಹುಡುಕಿ ನೋಡಿ. ನಾವು ಮಾತನಾಡಿದ್ದನ್ನು ಮಾತ್ರ ತಿರುಗಿಸಿ ಹಾಕುತ್ತೀರಿ. ಅವರ ವಿಚಾರದಲ್ಲಿ ಅದೇ ರೀತಿ ನಡೆಯಿರಿ. ನಾನು ಈ ಹಿಂದೆ ಆಡಿದ ಮಾತುಗಳಿಗೆ ಬದ್ಧನಾಗಿ ಇದ್ದೇನೆ. ದೇವೇಗೌಡರು, ಕುಮಾರಸ್ವಾಮಿ ಅವರು ಪ್ರಧಾನಿಗಳ ಬಗ್ಗೆ ಹಾಗೂ ಬಿಜೆಪಿ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದನ್ನು ಜನರಿಗೆ ಮಾಧ್ಯಮಗಳು ತಿಳಿಸಬೇಕು ಎಂದರು.

ಕುರಾನ್ ಜತೆಗೆ ಹಣ ಹಂಚಿಕೆ ಬಗ್ಗೆ ಕೇಳಿದಾಗ "ಈ ಬಗ್ಗೆ ದೂರು ದಾಖಲಾಗಿದೆ. ಕುರಾನ್ ಧರ್ಮ ಗ್ರಂಥ ಹಾಗೂ ಕರಪತ್ರದ ಜತೆಗೆ ಹಣ ಹಂಚಿಕೆ ಮಾಡಲಾಗುತ್ತಿರುವ ಫೋಟೋಗಳನ್ನು ನೋಡಿದ್ದೇನೆ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಚುನಾವಣೆಯು ಕೇವಲ ಒಂದು ವಾರ ಇರುವಾಗ, ಜನರಿಗೆ ಹಣ ಹಂಚಿ ಗೆಲ್ಲಬೇಕು ಎಂದು ಹೇಳಿದ್ದರು. ಇದೇ ಚಾಳಿಯನ್ನು ಈಗ ಚನ್ನಪಟ್ಟಣದಲ್ಲಿ ಮುಂದುವರೆಸುತ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಕ್ಷೇತ್ರದಲ್ಲಿಯೇ ಉಳಿದು ಮಗ, ಮೊಮ್ಮಗನನ್ನು ಗೆಲ್ಲಿಸಿಕೊಳ್ಳಲು ತಂತ್ರ ಮಾಡುತ್ತಾ ಇದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net