

ಬಂಟ್ವಾಳ: ಜೆಸಿಐ ಬಂಟ್ವಾಳದ ನೇತೃತ್ವದಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘ ದ.ಕ. ಜಿಲ್ಲಾ ಘಟಕ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ವರಟೀಲು ನಿವಾಸಿ ಲಕ್ಷ್ಮೀ ಅವರ ಬಡ ಕುಟುಂಬಕ್ಕೆ ಹೊಸ ಮನೆ ನಿರ್ಮಾಣಗೊಳ್ಳುತ್ತಿದ್ದು, ಬುಧವಾರ ಜೆಸಿಐ ಬಂಟ್ವಾಳದ ಸದಸ್ಯರು ಶ್ರಮದಾನ ಮೂಲಕ ಪಂಚಾಂಗಕ್ಕೆ ಮಣ್ಣು ತುಂಬುವ ಕೆಲಸ ಮಾಡಿದರು.
ಲಕ್ಷ್ಮೀ ಅವರಿಗೆ ಇಬ್ಬರು ಮಕ್ಕಳಿದ್ದು, ವೃದ್ಧ ತಂದೆ ತಾಯಿಯೊಂದಿಗೆ ಟರ್ಪಾಲು ಹಾಸಿದ ಡೇರೆಯಲ್ಲಿ ವಾಸವಾಗಿದ್ದಾರೆ. ಮೂರು ವರ್ಷಗಳ ಹಿಂದೆ ಅವರ ವಾಸದ ಮನೆ ಮಳೆಗೆ ಕುಸಿದು ಬಿದ್ದಿತ್ತು. ಬಳಿಕ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ಮನೆ ಮಂಜೂರಾಗಿದ್ದರೂ ಕಾರಣಾಂತರಗಳಿಂದ ಮನೆ ನಿರ್ಮಾಣ ಸಾಧ್ಯವಾಗದೆ ಬಿಡುಗಡೆಯಾಗಿದ್ದ ಅನುದಾನವೂ ವಾಪಸಾಗಿತ್ತು. ಇದರಿಂದಾಗಿ ಮನೆ ನಿರ್ಮಾಣದ ಕನಸು ಸಾಕಾರಗೊಳ್ಳದೆ 3 ವರ್ಷಗಳಿಂದ ಡೇರೆ ಕಟ್ಟಿಕೊಂಡು ವಾಸವಾಗಿದ್ದಾರೆ.
ಇವರ ಈ ಅಸಹಾಯಕ ಪರಿಸ್ಥಿತಿಯನ್ನು ಗಮನಿಸಿ ‘ವಿಜಯವಾಣಿ’ ಸೆ.24ರ ಸಂಚಿಕೆಯಲ್ಲಿ ವರಟೀಲು ಕುಟುಂಬಕ್ಕೆ ಡೇರೆ ಅರಮನೆ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಬಡಕುಟಂಬದ ಸಂಕಷ್ಟಕ್ಕೆ ಸ್ಪಂದಿಸಿದ ಜೆಸಿಐ ಬಂಟ್ವಾಳ ಮನೆ ನಿರ್ಮಾಣದ ಸಂಕಲ್ಪ ತೊಟ್ಟು, ಕೆಲಸ ಆರಂಭಿಸಿದೆ. ಇವರೊಂದಿಗೆ ಆದಿ ದ್ರಾವಿಡ ಸಮಾಜ ಸೇವಾ ಸಂಘದ ದ.ಕ. ಜಿಲ್ಲಾ ಸಮಿತಿ ಕೈಜೋಡಿಸಿದ್ದು, ಪಂಚಾಂಗದ ಕೆಲಸ ಪೂರ್ತಿಯಾಗಿದೆ.