

ನವದೆಹಲಿ: ಖ್ಯಾತ ನಟಿ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಹಿರಿಯ ನಟಿ ಜಯಪ್ರದ ಅವರು ತಮ್ಮ ಮೊದಲ ಚಿತ್ರದ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಸ್ಮರಿಸಿದ್ದಾರೆ.
ತುಂಬಾ ಚಿಕ್ಕ ವಯಸ್ಸಿನಲ್ಲೇ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಜಯಪ್ರದ ಅವರು, ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾದಲ್ಲಿ ನಟಿಸಿದ್ದಾರೆ.
ಸದ್ಯ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ 1974ರಲ್ಲಿ ತೆರೆಗೆ ಬಂದ ಭೂಮಿ ಕೊಸಮ್ ಚಿತ್ರದಲ್ಲಿ ಸೀರೆಯುಟ್ಟು ತಲೆ ಮೇಲೆ ಬಿಂದಿಗೆ ಇಟ್ಟುಕೊಂಡಿರುವ ಚಿತ್ರವನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಕೆ.ಬಿ.ತಿಲಕ್ ನಿರ್ದೇಶಿಸಿದ್ದರು.
ಈ ಚಿತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ತುಂಬಾ ಸುಂದರವಾಗಿದ್ದೀರಾ ಮೇಡಂ… ನಿಮಗೆ ದೇವರ ಆಶೀರ್ವಾದ ಸದಾ ಇರಲಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಚಿತ್ರರಂಗಕ್ಕೆ ಪ್ರವೇಶಿಸಿದಾಗ ಜಯಪ್ರದ ಅವರಿಗೆ ಕೇವಲ 14 ವರ್ಷ. ಆಂಧ್ರ ಪ್ರದೇಶದಲ್ಲಿ ಜನಿಸಿದ ಅವರ ಮೊದಲ ಹೆಸರು ಲಲಿತಾ ರಾಣಿ. ಮೊದಲ ಸಿನಿಮಾದಲ್ಲೇ ಜಯಪ್ರದ ಆಗಿ ನಟಿಸಿದ್ದಕ್ಕಾಗಿ ಮುಂದೆಯೂ ಇವರು ಈ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದ್ದು ಈಗ ಇತಿಹಾಸ.