ಲಾಕ್‌ಡೌನ್: ಹಿರಿಯ ನಟಿ ಜಯಂತಿ ಎಲ್ಲಿದ್ದಾರೆ ಗೊತ್ತಾ?

Jayanthi Final
Published on

ಲಾಕ್‌ಡೌನ್‌ನಿಂದ ಇಡೀ ದೇಶ ಬಂದ್ ಆಗಿದೆ. ಮೇ 3ರವರೆಗೂ ಈ ಲಾಕ್‌ಡೌನ್ ಮುಂದುವರೆಯಲಿದ್ದು, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲೇ ಇರುವಂತಾಗಿದೆ. ಇಂಥಾ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಅವರು ಎಲ್ಲಿದ್ದಾರೆ ಗೊತ್ತಾ? ಬೆಂಗಳೂರಿನಿಂದ 340ಕ್ಕೂ ಹೆಚ್ಚು ಕಿಲೋಮೀಟರ್ ದೂರವಿರುವ ಹಂಪಿ ಬಳಿಯ ಕಮಲಾಪುರದಲ್ಲಿ.

ಕಳೆದ ವರ್ಷ ತೀವ್ರ ಅನಾರೋಗ್ಯದಿಂದ ಬಳಲಿದ್ದ ಜಯಂತಿ ಅವರು ಇದೀಗ ತಮ್ಮ ಮಗ ಕೃಷ್ಣಕುಮಾರ್ ಜತೆಗೆ ಬಳ್ಳಾರಿ ಜಿಲ್ಲೆಯ ಕಮಲಾಪುರದಲ್ಲಿ ಇದ್ದಾರೆ. ಕಳೆದ 45 ದಿನಗಳಿಂದಲೂ ಅವರು ಅಲ್ಲೇ ಸೇಫ್​ ಆಗಿ ಇದ್ದಾರೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಜಯಂತಿ ಅವರ ಮಗ ಕೃಷ್ಣಕುಮಾರ್, ‘ನಾನು, ಅಮ್ಮ ಕಮಲಾಪುರದಲ್ಲಿ ಇದ್ದೇವೆ. ಸೇಫ್​ ಆಗಿದ್ದೇವೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಾನು ಪ್ರಾಜೆಕ್ಟ್‌ವೊಂದರ ನಿಮಿತ್ತ ಕಮಲಾಪುರಕ್ಕೆ ಫೆಬ್ರವರಿಯಲ್ಲಿ ಬರುವುದಿತ್ತು. ಹೇಗೂ ಬಳ್ಳಾರಿ ಅಮ್ಮನ ಸ್ವಂತ ಊರಾದ್ದರಿಂದ, ಅವರೂ ಬರುತ್ತೀನಿ ಎಂದರು. ಇಬ್ಬರೂ ಫೆಬ್ರವರಿಯಲ್ಲೇ ಇಲ್ಲಿ ಬಂದೆವು. ಕ್ರಮೇಣ ಕಳೆದ ತಿಂಗಳ 15ರಿಂದ ಇಲ್ಲಿ ಲಾಕ್‌ಡೌನ್ ಶುರುವಾಯಿತು. ಹಾಗಾಗಿ ನಾವು ಇಲ್ಲೇ ಉಳಿಯಬೇಕಾಯಿತು’ ಎನ್ನುತ್ತಾರೆ ಕೃಷ್ಣಕುಮಾರ್.

ಜಯಂತಿ ಅವರ ಆರೋಗ್ಯ ಚೆನ್ನಾಗಿದೆ ಎನ್ನುವ ಅವರು, ‘ಅಮ್ಮನ ಆರೋಗ್ಯದಲ್ಲಿ ಏನೂ ಸಮಸ್ಯೆಯಿಲ್ಲ. ಔಷಧಿ ಇಲ್ಲೇ ಸಿಗುತ್ತಿದೆ. ಅಂತಹ ತುರ್ತೇನೂ ಇಲ್ಲ. ಇಲ್ಲಿ ಸುರಕ್ಷಿತವಾಗಿರುವುದರಿಂದ, ನಾವು ಬೆಂಗಳೂರಿಗೆ ವಾಪಸ್ಸು ಬರುವುದಕ್ಕೆ ಅನುಮತಿ ಕೇಳಿಲ್ಲ. ಅಗತ್ಯ ಬಿದ್ದರೆ ಮುಂದೆ ಕೇಳಬಹುದು. ಸದ್ಯಕ್ಕಂತೂ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ಯಾವುದೇ ಸಮಸ್ಯೆಗಳಿಲ್ಲ’ ಎನ್ನುತ್ತಾರೆ ಕೃಷ್ಣ ಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net