ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪಲ್ಲಟಕ್ಕೂ ಬೆಳಗಾವಿಗೂ ನಿಕಟಬಾಂಧವ್ಯವಿದೆ. ಸುವರ್ಣ ವಿಧಾನಸೌಧ ಕಟ್ಟಿದ ನಂತರ ನಾನಾ, ನೀನಾ ಶುರುವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನೀನಾ, ನಾನಾ ಎಂಬ ವಾತಾವರಣವಿತ್ತು. ಈಗ ನಾನಾ, ನೀನಾ ಎಂದು ಬದಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಮುನಿರತ್ನ ವಿಶ್ಲೇಷಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ ಭದ್ರಕೋಟೆಯಲ್ಲಿ ಒಂದೊಂದೇ ಕಲ್ಲು ಉದುರಿ ಸಡಿಲವಾಗುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸುವುದು ನಿಶ್ಚಿತವೆಂದು ಭವಿಷ್ಯ ನುಡಿದರು.
ಶಾಸಕರು ಗುಂಪೊಂದು ಮೈಸೂರಿಗೆ ಹೊರಡಲು ಸಜ್ಜಾಗಿತ್ತು. ಕಾಂಗ್ರೆಸ್ ಪಕ್ಷದ 135 ಶಾಸಕರು ಎಷ್ಟರಮಟ್ಟಿಗೆ ಒಗ್ಗಟ್ಟಿನಿಂದಿದ್ದಾರೆ ಎನ್ನುವುದು ಬಹಿರಂಗವಾಗಿದೆ ಎಂದು ಮುನಿರತ್ನ ಛೇಡಿಸಿದರು.
ಮೂಕ ಪ್ರೇಕ್ಷಕ
ಕಾಂಗ್ರೆಸ್ ಒಳಗಿನ ಕಿತ್ತಾಟ, ಶಾಸಕರ ಅಸಮಾಧಾನ, ಬಲಪ್ರದರ್ಶನ ಪ್ರಯತ್ನಗಳಿಗೆ ಪ್ರತಿಪಕ್ಷ ಬಿಜೆಪಿ ಮೂಕಪ್ರೇಕ್ಷಕವಾಗಿದೆ. ಕಾಂಗ್ರೆಸ್‌ಗೆ ನಿಚ್ಚಳ ಜನಾದೇಶ ದೊರೆತಿದೆ, ಒಳ್ಳೆಯ ಆಡಳಿತ ನೀಡಲಿ ಎಂದು ಬಯಸುತ್ತೇವೆ. ಅದನ್ನು ಬಿಟ್ಟು ಬೇರೇನೋ ಆಲೋಚನೆ ಮಾಡಿಲ್ಲ, ಮಾಡುವುದೂ ಇಲ್ಲವೆಂದರು.
ಅಭಿವೃದ್ಧಿಯೆಂದರೆ ಒಂದು ಕ್ಷೇತ್ರಕ್ಕೆ ಹಂಚಿಕೆಯಾದ ಅನುದಾನ ವಾಪಸ್ ಪಡೆದು, ಇನ್ನೊಂದು ಕ್ಷೇತ್ರಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಬೊಕ್ಕಸದಲ್ಲಿ ಹಣವಿಲ್ಲ, ಆಡಳಿತದ ಪರಿಯೂ ಗೊತ್ತಾಗುತ್ತಿದೆ ಎಂದು ಮುನಿರತ್ನ ವ್ಯಂಗ್ಯವಾಡಿದರು.
ಎಚ್‌ಡಿಕೆ ಹೇಳಿಕೆಗೆ ಸಮರ್ಥನೆ
ಬಿಜೆಪಿ ಅಧಿಕಾರಾವಧಿಯಲ್ಲಿ ಕಲ್ಲಿದ್ದಲು, ವಿದ್ಯುತ್ ಉತ್ಪಾದನೆ ಸಮಸ್ಯೆಯಿದ್ದಿಲ್ಲ. ವಿದ್ಯುತ್ ಖರೀದಿ ಮಾಡಬೇಕಾದ ಪ್ರಮೇಯವೇ ಉದ್ಭವಿಸಿದ್ದಿಲ್ಲ. ಈ ಬಾರಿ ಮಳೆ ಕೊರತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ದಾಸ್ತಾನು ಮಾಡಿಕೊಳ್ಳಲು ಅವಕಾಶವಿತ್ತು.
ಅಷ್ಟೇ ಏಕೆ, ಅವರ ಕಾಲದಲ್ಲಿ ಸೋಲಾರ್ ವಿದ್ಯುತ್ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿತ್ತು.
ಕಮಿಷನ್ ಹೊಡೆಯಲು ವಿದ್ಯುತ್ ಕೃತಕ ಅಭಾವ ಸೃಷ್ಟಿಸಿ ಏಕಾಏಕಿ ವಿದ್ಯುತ್ ಖರೀದಿಗೆ ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಬೊಕ್ಕಸಕ್ಕೆ ಜಮೆಯಾದ ಹಣವನ್ನೆಲ್ಲ ಗ್ಯಾರಂಟಿಗಳಿಗೆ ಸುರಿಯುತ್ತಿದ್ದು, ಅಭಿವೃದ್ಧಿಗೆ ನಯಾಪೈಸೆ ಅನುದಾನ ಕೊಡುತ್ತಿಲ್ಲ. ರಾಜ್ಯವನ್ನು ಕತ್ತಲೆಯತ್ತ ಕೊಂಡೊಯ್ಯುತ್ತಿದ್ದು, ಜನರಿಗೆ ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ ಎಂದು ಮುನಿರತ್ನ ಕಿಡಿಕಾರಿದರು.