ಆಡ್ತಾ ಆಡ್ತಾ ಗಿನ್ನೆಸ್​ ದಾಖಲೆ ಬರೆದ 90ರ ಅಜ್ಜಿ: ಈಕೆ ಆಡಿದ್ದಾದರೂ ಏನು?

ajji
Published on

ಟೊಕಿಯೋ: ಇದು ಡಿಜಿಟಲ್​ ಯುಗ. ಅದರಲ್ಲಿಯೂ ಆನ್​ಲೈನ್​ ಗೇಮ್ಸ್​ಗಳಿಗಂತೂ ಇದೀಗ ಭಾರಿ ಬೇಡಿಕೆ.

ಆದರೆ ಆನ್​ಲೈನ್​ ಗೇಮ್ಸ್​ ಎಂದಾಕ್ಷಣ ಕಣ್ಣ ಮುಂದೆ ಬರುವುದು ಮಕ್ಕಳು ಇಲ್ಲವೇ ಯುವಕರು. ಆದರೆ ಜಪಾನ್​ನಲ್ಲೊಬ್ಬ ಅಜ್ಜಿ ಅನ್​ಲೈಮ್​ ಆಡವಾಡುತ್ತಲೇ ಗಿನ್ನೆಸ್​ ದಾಖಲೆ ಬರೆದಿದ್ದಾಳೆ!

ಹೌದು. ಈ ಅಜ್ಜಿಯ ವಯಸ್ಸು ಬರೋಬ್ಬರಿ 90 ವರ್ಷ! ಹೆಸರು ಹಮಕೋ ಮರಿ. ವಿಡಿಯೋ ಗೇಮ್‌ ಮೂಲಕ ಇದಾಗಲೇ ವಿಶ್ವವಿಖ್ಯಾತಿ ಪಡೆದಿರುವ ಈ ಈಕೆ ಗೇಮರ್ ಅಜ್ಜಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಅದೇ ಆಟದ ಮೂಲಕ ಅತಿ ಹಿರಿಯ ಯೂಟ್ಯೂಬ್ ಗೇಮರ್ ಎಂಬ ದಾಖಲೆ ಮಾಡಿದ್ದು, ತಮ್ಮ ಹೆಸರನ್ನು ಗಿನ್ನೆಸ್​ ವಿಶ್ವ ದಾಖಲೆ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.

ಆನ್​ಲೈನ್​ ಗೇಮ್​ಗಳಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಆರೋಪದ ನಡುವೆಯೇ ಈ ಅಜ್ಜಿ ಇಂಥದ್ದೊಂದು ಸಾಹಸ ಮಾಡಿದ್ದಾರೆ! ಅತ್ಯಂತ ಅಪಾಯಕಾರಿ, ಮಕ್ಕಳ ಜೀವಕ್ಕೆ ಕುತ್ತು ತರುವ ಆಟ ಎಂದೇ ಪ್ರಸಿದ್ಧಿ ಹೊಂದಿರುವ ಪಬ್‌ಜಿ ಸೇರಿದಂತೆ ಫಿಫಾ, ಸಿಒಡಿ ಎಲ್ಲ ಆಟಗಳನ್ನೂ ಈಕೆ ಸಲೀಸಾಗಿ ಆಡುತ್ತಾಳೆ. ದಿನಕ್ಕೆ ಮೂರು ಗಂಟೆಗೂ ಅಧಿಕ ಕಾಲ ಕುಳಿತಲ್ಲಿಯೇ ಕುಳಿತು ಆಟವಾಡುವ ಮೂಲಕ ಸಾಧನೆ ಮಾಡಿದ್ದಾಳೆ!

ಯೂಟ್ಯೂಬ್‌ನಲ್ಲಿ ಹಮಕೋ ಮರಿ 2014ರಿಂದ ತಮ್ಮ ಸ್ವಂತ ಚಾನೆಲ್ ಒಂದನ್ನು ಹೊಂದಿದ್ದಾರೆ. ನಂತರ ತಮ್ಮ ಪತಿಯನ್ನು ಕಳೆದುಕೊಂಡ ಮೇಲೆ ಆಟವಾಡುವುದನ್ನೇ ಹವ್ಯಾಸವಾಗಿಸಿಕೊಂಡರು. ಕನಿಷ್ಠ ನಾಲ್ಕು ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರತೀ ತಿಂಗಳು ಹಂಚಿಕೊಂಡು ಬರುತ್ತಿದ್ದಾರೆ. 1930ರಲ್ಲಿ ಹುಟ್ಟಿದ ಈ ಅಜ್ಜಿ ತಮ್ಮ 39ನೇ ವಯಸ್ಸಿನಿಂದ ಗೇಮಿಂಗ್ ಚಟವನ್ನು ಅಂಟಿಸಿಕೊಂಡಿದ್ದರಂತೆ. 1981ರ ವೇಳೆಗೆ ಇವರು ವಿಡಿಯೋ ಗೇಮ್‌ ಲೋಕದ ತಾರೆ ಎನಿಸಿಕೊಂಡಿದ್ದರು. ಮುಂದೆ ಇದೇ ಹವ್ಯಾಸವನ್ನು ಮುಂದುವರಿಸಿಕೊಂಡು ಬಂದ ಈಕೆ ಯುಟ್ಯೂಬ್ ಚಾನೆಲ್ ಮೂಲಕ ಮತ್ತಷ್ಟು ಖ್ಯಾತರಾಗಿದ್ದಾರೆ.

ಈ ಅಜ್ಜಿಯ ಮಕ್ಕಳು ವಯಸ್ಸಾಗಿ ಮೃತಪಟ್ಟಿದ್ದು, ಮೊಮ್ಮಕ್ಕಳ ಪೈಕಿ 49 ವರ್ಷದ ಏಕೈಕ ಸದಸ್ಯ ಬದುಕಿದ್ದಾರೆ. ಸದ್ಯ ಈ ಅಜ್ಜಿಯ ಯುಟ್ಯೂಬ್ ಚಾನೆಲ್‌ಗೆ 2.78 ಲಕ್ಷದಷ್ಟು ಚಂದಾದಾರರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net