ಉದ್ಯೋಗಿಗಳ ಯೋಗಕ್ಷೇಮದದಲ್ಲಿ ಜಪಾನ್​​ಗೆ ಕೊನೆಯ ಸ್ಥಾನ, ಹಾಗಾದರೆ ಭಾರತ…

employ
Published on

ನವದೆಹಲಿ: ಉದ್ಯೋಗಿಗಳ ಯೋಗಕ್ಷೇಮದ ಜಾಗತಿಕ ಶ್ರೇಯಾಂಕದಲ್ಲಿ ಜಪಾನ್ ಕೊನೆಯ ಸ್ಥಾನದಲ್ಲಿದೆ. ಆದರೆ ಭಾರತ 2 ನೇ ಸ್ಥಾನದಲ್ಲಿದ್ದು, ಟರ್ಕಿ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: 

ಮೆಕಿನ್ಸೆ ಹೆಲ್ತ್ ಇನ್ಸ್ಟಿಟ್ಯೂಟ್ 30 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಕಾರ್ಮಿಕರ ಸಮೀಕ್ಷೆ ನಡೆಸಿದ್ದು, ದ್ವೀಪ ರಾಷ್ಟ್ರ ಜಪಾನ್​ ಉದ್ಯೋಗ ಮತ್ತು ಉದ್ಯೋಗ ಭದ್ರತೆ ನೀಡುವಲ್ಲಿ ಖ್ಯಾತಿಗಳಿಸಿದೆಯಾದರೂ, ಉದ್ಯೋಗಿಗಳು ಸಂತುಷ್ಟರಾಗಿಲ್ಲ. ಇದರರ್ಥ ಕಠಿಣ ದುಡಿಮೆ, ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಸರ್ವೇಯಲ್ಲಿ ಉದ್ಯೋಗಿಗಳು ಜಪಾನ್​ಗೆ ಶೇ.25 ಅಂಕ ನೀಡಿದ್ದಾರೆ. ಟರ್ಕಿ ಅತ್ಯಧಿಕ ಶೇ.78, ಭಾರತಕ್ಕೆ ಶೇ 76 ಮತ್ತು ಚೀನಾಕ್ಕೆ ಶೇ.75 ಅಂಕ ನೀಡಿದ್ದಾರೆ. ಜಾಗತಿಕ ಸರಾಸರಿ 57 ಆಗಿದೆ.

ಅಂತಾರಾಷ್ಟ್ರೀಯ ಸಮೀಕ್ಷೆಗಳಲ್ಲಿ ಜಪಾನ್ ಸತತವಾಗಿ ಕಡಿಮೆ ರೇಟಿಂಗ್‌ ಹೊಂದಿದೆ. ರೋಚೆಲ್ ಕಾಪ್ ಪ್ರಕಾರ ಕಂಪೆನಿಗಳು ಉದ್ಯೋಗಿಗಳಿಗೆ ಸಂವಹನ, ಸಾಂಸ್ಕೃತಿಕ ಬೆಸುಗೆ ಮತ್ತು ವ್ಯಾಪಾರ ಮಾಡುವ ಅಭ್ಯಾಸಗಳನ್ನು ಹೆಚ್ಚಿಸಬೇಕಿದೆ ಎಂದು ಸಲಹೆ ನೀಡುತ್ತಾರೆ.

ಇನ್ಶುರೆನ್ಸ್ ಗ್ರೂಪ್ ಹೋಲ್ಡಿಂಗ್ಸ್ ಇಂಕ್‌ನ ಮಂಡಳಿ ಸದಸ್ಯ ಕೊಪ್ ಹೇಳುವಂತೆ, ಜಪಾನ್‌ನಲ್ಲಿ ಕೆಲಸದ ಸ್ಥಳದಲ್ಲಿ ತೃಪ್ತಿಯ ಕೊರತೆ ಇದೆ. ಒತ್ತಡದೊಂದಿಗೆ ಗಮನಾರ್ಹ ಸಮಸ್ಯೆಗಳಿವೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಅಲ್ಪಾವಧಿಯ ಒಪ್ಪಂದಗಳಲ್ಲಿದ್ದಾರೆ, ಇದು ಅವರಲ್ಲಿ ಅನಿಶ್ಚಿತತೆ ಕಾಡುವಂತೆ ಮಾಡಿದೆ ಎಂದು ಹೇಳುತ್ತಾರೆ.

ಮೆಕಿನ್ಸೆ ಸಮೀಕ್ಷೆಯ ಪ್ರಕಾರ, ಕೆಲಸದಲ್ಲಿ ತೃಪ್ತಿ ಮತ್ತು ಸಕಾರಾತ್ಮಕ ಅನುಭವ ಹೊಂದಿರುವ ಉದ್ಯೋಗಿಗಳಲ್ಲಿ ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ. ಅವರು ಉತ್ತಮ ಆರೋಗ್ಯ ಹೊಂದಿರುವುದರ ಜತೆಗೆ ಕೆಲಸದಲ್ಲಿ ಹೆಚ್ಚು ಲವಲವಿಕೆಯಿಂದ ಇರುತ್ತಾರೆ. ಅಧಿಕ ಸಮಯ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಎನ್ನುತ್ತದೆ.

ಹೆಚ್ಚಿನ ವಯಸ್ಕರು ದೈನಂದಿನ ಜೀವನದಲ್ಲಿ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯುತ್ತಿದ್ದಾರೆ. ಹೀಗಾಗಿ ಉದ್ಯೋಗದಾತರು ತಮ್ಮ ಉದ್ಯೋಗಿಗಳ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ನೀಡಬೇಕಿದೆ ಎಂದು ಮೆಕಿನ್ಸೆ ಸಮೀಕ್ಷೆ ಸೂಚಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net