ಈ ಭಗವಂತನ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಆಸೆ: ಮದುವೆ ಕುರಿತು ಜಾನ್ವಿ ಕಪೂರ್​ ಮನದಾಳ | Janhvi Kapoor

ವಿಜಯವಾಣಿ - 2025-01-27T124632.693
Published on

Janhvi Kapoor: ಬಾಲಿವುಡ್​ನ ದಿಗ್ಗಜ ನಟಿ, ದಿವಗಂತ ಶ್ರೀದೇವಿ ಬಗ್ಗೆ ಹೆಚ್ಚೇನು ತಿಳಿಸುವ ಅಗತ್ಯವಿಲ್ಲ. 90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ಶ್ರೀದೇವಿ, ತಮ್ಮ ಪಾತ್ರಗಳ ಆಯ್ಕೆ ಮತ್ತು ಸಿನಿಮಾಗಳಿಂದಲೇ ಅಪಾರ ಸಿನಿಪ್ರೇಕ್ಷಕರ ಹೃದಯ ಗೆದ್ದವರು. ತಮಿಳುನಾಡಿನಲ್ಲಿ ಬಾಲನಟಿಯಾಗಿ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ಬಹುತೇಕರಿಗೆ ಗೊತ್ತೇ ಇದೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಅಪಾರ ಮನ್ನಣೆ ಗಳಿಸಿದ ಶ್ರೀದೇವಿ, ನಂತರದಲ್ಲಿ ತಮಿಳು, ತೆಲುಗು, ಹಿಂದಿ ಮತ್ತು ಇತರ ಭಾಷೆಗಳಲ್ಲಿ ತಮ್ಮ ಛಾಪು ಮೂಡಿಸಿದರು. ಈಗ ಅವರ ಪುತ್ರಿ ಜಾನ್ವಿ ಅವರ ಸರದಿ.

ತಿರುಪತಿ ತಿಮ್ಮಪ್ಪನ ದರ್ಶನ

ಶ್ರೀದೇವಿ ಅವರ ಹಿರಿಯ ಮಗಳಾದ ಜಾನ್ವಿ ಕಪೂರ್, ತಮ್ಮ ವೃತ್ತಿಯನ್ನು ಬಾಲಿವುಡ್​ನಲ್ಲಿ ಆರಂಭಿಸಿ, ಈಗ ತೆಲುಗಿನತ್ತ ಮುಖ ಮಾಡಿದ್ದಾರೆ. ಹಿಂದಿಯಲ್ಲಿ ಪ್ರಮುಖ ನಟಿಯಾಗಿ ಪಾದಾರ್ಪಣೆ ಮಾಡಿ ನಂತರ ದಕ್ಷಿಣ ಭಾರತೀಯ ಚಿತ್ರರಂಗದತ್ತ ಗಮನ ಹರಿಸಿದ್ದಾರೆ. ತೆಲುಗಿನಲ್ಲಿ ಜೂನಿಯರ್ ಎನ್‌ಟಿಆರ್ ಅಭಿನಯದ 'ದೇವರ' ಚಿತ್ರದಲ್ಲಿ ಕಾಣಿಸಿಕೊಂಡ ಜಾನ್ವಿ, ಈಗ ರಾಮ್​ ಚರಣ್​ ಅವರ ಬಹುನಿರೀಕ್ಷಿತ 'ಆರ್​ಸಿ 16' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತಮ್ಮ ಕೆಲಸಗಳ ನಡುವೆಯೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ, ತಾಯಿಯಂತೆಯೇ ತಿರುಪತಿ ದೇಗುಲಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ.

3550 ಮೆಟ್ಟಿಲು

ಈ ಹಿಂದೆ ಆಗಾಗ್ಗೆ ತಿರುಪತಿಗೆ ಭೇಟಿ ಕೊಡುತ್ತಿದ್ದ ಶ್ರೀದೇವಿ, ಕುಟುಂಬದ ಜತೆಗೆ ತಿಮ್ಮಪ್ಪನ ದರ್ಶನ ಪಡೆದು, ಮುಂಬೈಗೆ ಹಿಂತಿರುಗುತ್ತಿದ್ದರು. ಅಮ್ಮನ ಮರಣದ ನಂತರ ಪ್ರತಿ ವರ್ಷ ನಾಲ್ಕು ಅಥವಾ ಐದು ಬಾರಿ ತಿಮ್ಮಪ್ಪನನ್ನು ನೋಡಲು ಬರುತ್ತಿರುವ ಜಾನ್ವಿ, ವಿಶೇಷವಾಗಿ ತಮ್ಮ ತಾಯಿಯ ಜನ್ಮದಿನ ಮತ್ತು ಪುಣ್ಯಸ್ಮರಣೆ ದಿನದಂದು ತಿರುಮಲಕ್ಕೆ ಭೇಟಿ ಕೊಟ್ಟು, ದೇವರ ದರ್ಶನ ಪಡೆಯುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ವಿಶೇಷವಾಗಿ ಇಂತಹ ಸಮಯದಲ್ಲಿ, ತಿರುಪತಿಯಿಂದ ಕಾಲ್ನಡಿಗೆಯಲ್ಲಿ 3550 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯುತ್ತಾರೆ.

ಮದುವೆಯಾಗುವ ಬಯಕೆ

ಇತ್ತೀಚೆಗೆ, ಹೊಸ ವರ್ಷದ ಆರಂಭದಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ತಿರುಮಲಕ್ಕೆ ಭೇಟಿ ನೀಡಿದ ಜಾನ್ವಿ ಕಪೂರ್, ಸಂದರ್ಶನವೊಂದರಲ್ಲಿ ಈ ಕುರಿತಂತೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. "ತಿರುಮಲ ನನ್ನ ನೆಚ್ಚಿನ ಸ್ಥಳ. ಇದು ನನಗೆ ಅತ್ಯಂತ ಪ್ರಿಯವಾದ ದೇವರು" ಎಂದರು. ಇನ್ನು ಮದುವೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನನಗೆ ತಿರುಪತಿಯಲ್ಲಿಯೇ ಮದುವೆಯಾಗುವ ಬಯಕೆಯಿದೆ. ಅದೇ ರೀತಿ, ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಆಗಾಗ್ಗೆ ತಿರುಮಲಕ್ಕೆ ಭೇಟಿ ನೀಡುವ ಆಸೆಯೂ ಇದೆ. ನನ್ನ ಜೀವನದ ಬಹುತೇಕ ಸಮಯವನ್ನು ಇಲ್ಲಿಯೇ ಕಳೆಯುವ ಆಸೆ ನನ್ನದು" ಎಂದು ಹೇಳಿರುವುದಾಗಿ ಸಿನಿ ವರದಿಯೊಂದು ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net