ಜನವರಿಯಿಂದ ಜೂನ್‌ವರೆಗೆ ಭಾರತೀಯ ಚಿತ್ರರಂಗದ ಕಲೆಕ್ಷನ್ ಎಷ್ಟು ಗೊತ್ತಾ? ಇಲ್ಲಿದೆ ಪೂರ್ಣ ಮಾಹಿತಿ ...

box 2
Published on

ಈ ವರ್ಷವೂ ಭಾರತೀಯ ಚಿತ್ರರಂಗಕ್ಕೆ ಆಶಾದಾಯಕವಾಗಿದೆ. ಗಳಿಕೆ ವಿಚಾರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇ.14ರಷ್ಟು ಹೆಚ್ಚಳವಾಗಿದೆ ಎಂದು ಖಾಸಗಿ ಸಂಸ್ಥೆ ವರದಿ ನೀಡಿದೆ. 2025ರ ಜನವರಿಯಿಂದ ಜೂನ್‌ವರೆಗೆ ಭಾರತೀಯ ಚಿತ್ರರಂಗವು ಅಂದಾಜು 5,723 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಇದರಲ್ಲಿ 17 ಚಿತ್ರಗಳು ನೂರು ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈ ಪಟ್ಟಿಯಲ್ಲಿ ಕನ್ನಡದ ಒಂದೇ ಒಂದು ಚಿತ್ರ ಇಲ್ಲ ಎನ್ನುವುದು ಬೇಸರದ ಸಂಗತಿ. 2025ರ ಜನವರಿಯಿಂದ ಜೂನ್ ತಿಂಗಳವರೆಗೆ ಬಿಡುಗಡೆಯಾದ ಸಿನಿಮಾಗಳ ಗಳಿಕೆಯನ್ನು ಆಧರಿಸಿ ಈ ವರದಿ ಪ್ರಕಟಿಸಲಾಗಿದೆ. ಇದರಲ್ಲಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳೇ ಪಾರಮ್ಯ ಮೆರದಿವೆ. ಈ ಎಲ್ಲ ಚಿತ್ರರಂಗದಿಂದ ಸೇರಿ ಒಟ್ಟು 5723 ಕೋಟಿ ರೂಪಾಯಿ ಗಳಿಕೆಯಾದ್ದು, ಕಳೆದ ವರ್ಷ ಇದೇ ಅವಧಿಗೆ 5,015 ಕೋಟಿ ರೂಪಾಯಿ ಮಾತ್ರ ಗಳಿಕೆಯಾಗಿತ್ತು. ಈ ಲೆಕ್ಕಾಚಾರದಲ್ಲಿ ಈ ವರ್ಷ ಶೇ.14ರಷ್ಟು ಹೆಚ್ಚಳವಾಗಿದೆ. -ಏಜೆನ್ಸೀಸ್

‘ಛಾವಾ’ ಗರಿಷ್ಠ ಗಳಿಕೆ

ಈ ವರ್ಷ ಬಾಲಿವುಡ್ ಸೇರಿ ಪರಭಾಷೆಯಲ್ಲಿ ಹಲವಾರು ಸಿನಿಮಾಗಳು ನಿರೀಕ್ಷೆ ಮೂಡಿಸಿದ್ದವು. ಆದರೆ, ನಿರೀಕ್ಷೆಯ ಮಧ್ಯೆ ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಚಿತ್ರವು ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಬಾಕ್ಸಾಫೀಸ್‌ನಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಒಟ್ಟು 693 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಈ ವರ್ಷದ ಜೂನ್‌ವರೆಗೆ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ‘ಛಾವಾ’ ಹೊರಹೊಮ್ಮಿದೆ.

100 ಕೋಟಿ ಕ್ಲಬ್ ಸೇರಿದ ಚಿತ್ರಗಳು

ಈ ವರ್ಷದ ನೂರು ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾಗಳ ಪೈಕಿ ’ಛಾವಾ’ ಮೊದಲ ಸ್ಥಾನದಲ್ಲಿದೆ. ಬಳಿಕ ತೆಲುಗಿನ ‘ಸಂಕ್ರಾತಿಕಿ ವಸ್ತುನ್ನಾಂ’ (222 ಕೋಟಿ ), ಹಿಂದಿಯ ‘ಸಿತಾರೆ ಜಮೀನ್ ಪರ್’ (201 ಕೋಟಿ), ಹೌಸ್‌ಫುಲ್-5 ( 200 ಕೋಟಿ), ‘ರೇಡ್-2’ ( 199 ಕೋಟಿ), ತಮಿಳಿನ ‘ಗುಡ್ ಬ್ಯಾಡ್ ಅಗ್ಲಿ’ (183 ಕೋಟಿ ರೂ.), ತೆಲುಗಿನ ‘ಗೇಮ್ ಚೇಂಜರ್’ (153 ಕೋಟಿ ರೂ.), ಮಲಯಾಳಂ ‘ತುಡುರಂ’ (144 ಕೋಟಿ ರೂ.), ಹಿಂದಿಯ ‘ಸ್ಕೈ ಫೋರ್ಸ್’ (130 ಕೋಟಿ ರೂ.), ಮಲಯಾಳಂ ‘ಎಲ್: ಎಂಪುರಾನ್’ (126 ಕೋಟಿ ರೂ.), ತಮಿಳಿನ ‘ಡ್ರ್ಯಾಗನ್’ (122 ಕೋಟಿ ರೂ.), ಇಂಗ್ಲೀಷನ್ ‘ಮಿಷನ್ ಇಂಪಾಸಿಬಲ್: ದ ಫೈನಲ್ ರಿಕಾನಿಂಗ್’ (121 ಕೋಟಿ ರೂ.), ‘ಸಿಕಂದರ್’ (120 ಕೋಟಿ ರೂ.), ‘ಡಾಕು ಮಹಾರಾಜ್ (109 ಕೊಟಿ ರೂ.), ‘ಕೇಸರಿ ಛಾಪ್ಟರ್- 2’ (109 ಕೋಟಿ ರೂ.), ತಮಿಳಿನ ‘ಕುಬೇರ’ (106 ಕೋಟಿ ರೂ.) ‘ಜಾಟ್ (103 ಕೋಟಿ ರೂ.) ಗಳಿಕೆ ಮಾಡಿವೆ. ಆದರೆ, ಈ ಪಟ್ಟಿಯಲ್ಲಿ ಕನ್ನಡದ ಯಾವುದೇ ಒಂದು ಚಿತ್ರ ಇಲ್ಲ.

ಯಾವ್ಯಾವ ಭಾಷೆಗೆ ಎಷ್ಟು ಪಾಲು

ಈ ವರ್ಷದ ಆರು ತಿಂಗಳಲ್ಲಿ ಗಳಿಕೆಯಾದ 5,723 ಕೋಟಿ ರೂಪಾಯಿಯಲ್ಲಿ ಹಿಂದಿ ಭಾಷೆಯ ಚಿತ್ರಗಳೇ ಹೆಚ್ಚು ಗಳಿಕೆ ಮಾಡಿರುವುದು ಎನ್ನುವುದು ಗಮನಾರ್ಹ ಸಂಗತಿ. ಒಟ್ಟು ಪಾಲಿನಲ್ಲಿ ಹಿಂದಿ ಚಿತ್ರಗಳು ಶೇ.39ರಷ್ಟು ಗಳಿಕೆ ಮಾಡಿ, ಪ್ರಥಮ ಸ್ಥಾನದಲ್ಲಿದೆ. ಇದರಲ್ಲಿ ತೆಲುಗು (ಶೇ.19), ತಮಿಳು (ಶೇ.17), ಮಲಯಾಳಂ (ಶೇ.10), ಹಾಲಿವುಡ್ (ಶೇ.10) ಹಾಗೂ ಕನ್ನಡ ಸೇರಿ ಇತರ ಭಾಷೆಗಳ ಚಿತ್ರಗಳು ಶೇ.5ರಷ್ಟು ಮಾತ್ರ ಗಳಿಕೆ ಮಾಡಿವೆ.

ಯಾವ ತಿಂಗಳಲ್ಲಿ ಎಷ್ಟೆಷ್ಟು ಗಳಿಕೆ

ಈ ವರ್ಷದ ಆರು ತಿಂಗಳಲ್ಲಿ ಫೆಬ್ರವರಿಯಲ್ಲಿ ಅತ್ಯಧಿಕ ಗಳಿಕೆಯಾಗಿರುವುದು. ಫೆಬ್ರವರಿಯಲ್ಲಿ 1,264 ಕೋಟಿ ರೂಪಾಯಿ ಗಳಿಕೆಯಾಗಿದೆ. ಜನವರಿ (1020 ಕೋಟಿ ರೂ.), ಫೆಬ್ರವರಿಯಲ್ಲಿ (1264 ಕೋಟಿ ರೂ.), ಮಾರ್ಚ್ (580 ಕೋಟಿ), ಎಪ್ರಿಲ್ (813 ಕೋಟಿ ರೂ.), ಮೇ (1126 ಕೋಟಿ ರೂಪಾಯಿ) ಹಾಗೂ ಜೂನ್‌ನಲ್ಲಿ 920 ಕೋಟಿ ರೂಪಾಯಿ ಗಳಿಕೆಯಾಗಿದೆ. ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಐಪಿಎಲ್ ಹಾಗೂ ಭಾರತ-ಪಾಕ್ ಮಧ್ಯೆ ಯುದ್ಧದ ಭೀತಿ ಎದುರಾಗಿದ್ದರಿಂದ ಆ ಸಮಯದಲ್ಲಿ ಸಿನಿಮಾಗಳು ರಿಲೀಸ್‌ಗೆ ಹಿಂದೇಟು ಹಾಕಿರುವುದರಿಂದ ಆಎರಡು ತಿಂಗಳಲ್ಲಿ ಗಳಿಕೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ದ್ವಿತೀಯಾರ್ಧದ ನಿರೀಕ್ಷೆ ಏನು?

ಇನ್ನು ಈ ವರ್ಷದ ದ್ವಿತೀಯಾರ್ಧದಲ್ಲಿ ಕನ್ನಡ ಸೇರಿ ಪರಭಾಷೆಗಳಲ್ಲೂ ಬಿಗ್​ಬಜೆಟ್ ಬಹು ನಿರೀಕ್ಷಿತ ಸಿನಿಮಾಗಳು ಬರುತ್ತಿವೆ. ಹೀಗಾಗಿ ದ್ವಿತಿಯಾರ್ಧದಲ್ಲಿ ಮೊದಲರ್ಧಕ್ಕಿಂತ ದುಪ್ಪಟ್ಟು ಗಳಿಕೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಕನ್ನಡದಲ್ಲಿ ಕೆಡಿ, ಕಾಂತಾರ, 45, ಕರಾವಳಿ ಹಾಗೂ ಡೆವಿಲ್​ ಸಿನಿಮಾಗಳು ಕೂಡ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆಯಿದೆ. ಹಿಂದಿಯ ವಾರ್-2, ಬಾಘಿ-4, ತಮಿಳಿನ ಕೂಲಿ, ತೆಲುಗಿನ ದ ರಾಜಾಸಾಬ್​ ಈ ಸಿನಿಮಾಗಳು ಹೆಚ್ಚು ಗಳಿಕೆಮಾಡುವ ಲಕ್ಷಣಗಳಿದ್ದು, ಈ ವರ್ಷದ ಗಳಿಕೆ 15 ಸಾವಿರ ಕೋಟಿಗೂ ಅಧಿಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net