

ನಂಜನಗೂಡು: ನಾಡಿನ ಸಂಸ್ಕೃತಿ ಉಳಿಸಲು ಯುವಜನರು ಮುಂದಾಗಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು. ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ -2025ಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಇಂತಹ ಜಾನಪದ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜನೆ ಮಾಡುವುದರಿಂದ ನಾಡಿನ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ ಎಂದರು.ಇಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಬಹಳ ಸಂಭ್ರಮದಿಂದ, ಉತ್ಸಾಹದಿಂದ ಜಾನಪದ ಸಂಭ್ರಮ ಆಚರಣೆ ಮಾಡುತ್ತಿರುವುದು ಇತರೆ ಸರ್ಕಾರಿ ಕಾಲೇಜುಗಳಿಗೆ ಮಾದರಿಯಾಗಿದೆ ಎಂದರು.ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಳ್ಳಿಗಳ ಸೊಬಗು ಬಿಂಬಿಸುವ ಪಂಚೆ, ಶಲ್ಯ, ಮತ್ತು ಸೀರೆ ತೊಟ್ಟು ಉತ್ಸಾಹದಿಂದ ಭಾಗಿಯಾಗಿದ್ದರು. ರಂಗೋಲಿ, ನೃತ್ಯ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ, ಉನ್ನತ ಶಿಕ್ಷಣ ಇಲಾಖೆ ಬೆಂಗಳೂರಿನ ಮುಖ್ಯ ಆಡಳಿತ ಅಧಿಕಾರಿ ಶೋಭಾ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ, ಸಾಹಿತಿ ಡಾ. ಬೈರಮಂಗಲ ರಾಮೇಗೌಡ, ಉದ್ಯಮಿ ವೃಷಭೇಂದ್ರ ಸ್ವಾಮಿ, ಉದ್ಯಮಿ ಯಶವಂತ, ಪ್ರಾಂಶುಪಾಲ ಕೆಂಪೇಗೌಡ, ಕನ್ನಡ ಪ್ರಾಧ್ಯಾಪಕ ಡಾ. ಜಯ ಶಂಕರ, ಉಪನ್ಯಾಸಕ ಹರೀಶ, ಡಾ. ಕೆಂಪಮ್ಮ, ನಾಗೇಶ ರಾಜ್, ಮಹೇಶ ಇತರರು ಹಾಜರಿದ್ದರು.