

ಕಡಬ: ವಿದ್ಯಾರ್ಥಿಗಳನ್ನು ನಮಾಜ್ ನಿರ್ವಹಣೆಯಿಂದ ಪ್ರಾರಂಭಗೊಂಡು ಪ್ರತಿಯೊಂದು ಹಂತದಲ್ಲೂ ಆಚಾರ-ವಿಚಾರ, ಸಂಸ್ಕಾರ, ಸತ್ಕರ್ಮಗಳನ್ನು ಬೋಧಿಸುವ ಮದ್ರಸದ ಸದರ್ ಮುಅಲ್ಲಿಂಗಳು(ಶಿಕ್ಷಕರು) ವಿದ್ಯೆಯ ರಾಯಭಾರಿಗಳು. ಅವರು ಸಮಾಜ ಮತ್ತು ಸಮುದಾಯಕ್ಕೆ ಮಾದರಿ ಆಗಿರಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ತೋಡಾರ್ ಉಸ್ಮಾನ್ ಫೈಝಿ ಹೇಳಿದರು.
ಕಡಬ ತಾಲೂಕು ಆತೂರು ಮುಹಿಯುದ್ದೀನ್ ಜುಮಾ ಮಸೀದಿ ಸಭಾಂಗಣದಲ್ಲಿ ಮಂಗಳವಾರ ದ.ಕ. ಜಿಲ್ಲಾ ‘ಸದರ್ ಮುಅಲ್ಲಿಂ ಸಂಗಮತಖ್ವೀಯಾ-2025’ ಸಮಾರಂಭದಲ್ಲಿ ದ.ಕ. ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ 50ನೇ ವಾರ್ಷಿಕೋತ್ಸವದ ಲೋಗೋ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮುಶಾವರ ಇನ್ನೋರ್ವ ಸದಸ್ಯ ಬಂಬ್ರಾಣ ಅಬ್ದುಲ್ ಖಾದರ್ ಅಲ್ಖಾಸಿಮಿ ಶುಭಹಾರೈಸಿದರು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೆಯ್ಯದ್ ಜುನೈದ್ ಜಿಫ್ರಿ ತಂಳ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ದ.ಕ. ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ಸೆಯ್ಯದ್ ಅಕ್ರಂ ಅಲೀ ತಂಳ್ ಕರಾವಳಿ, ಸೆಯ್ಯದ್ ಪೂಕುಂಞ್ ತಂಳ್, ಮದ್ರಸ ತಪಾಸಣಾಧಿಕಾರಿಗಳಾದ ಖಾಸಿಂ ಮುಸ್ಲಿಯಾರ್, ಉಮರ್ ದಾರಿಮಿ ಸಾಲ್ಮರ, ಜೆ.ಪಿ.ಮುಹಮ್ಮದ್ ದಾರಿಮಿ, ರಿಯಾಝ್ ರಹ್ಮಾನಿ, ಅತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಅಸ್ನವಿ, ಮೊಹಿಯುದ್ದೀನ್ ಜುವಾ ಮಸೀದಿ ಅಧ್ಯಕ್ಷ ಹೈದರ್ ಕಲಾಯಿ, ಕಾರ್ಯದರ್ಶಿ ಗಫಾರ್, ಮದ್ರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಜಿ.ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಅಝೀಜ್ ಕಿಡ್ಸ್, ಅಯ್ಯೂಬ್, ಫಲೂಲುದ್ದೀನ್ ಹೇಂತಾರ್ ಮತ್ತಿತರರಿದ್ದರು.
ಬಳಿಕ ಶೈಕ್ಷಣಿಕ ತರಬೇತಿ ಕಾರ್ಯಾಗಾರ ನಡೆಯಿತು. ದ.ಕ. ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮಹಮ್ಮದ್ ನವವಿ ಸ್ವಾಗತಿಸಿದರು. ರೇಂಜ್ ಕಾರ್ಯದರ್ಶಿ ಆಸಿಫ್ ಅಝ್ಹರಿ ಎಡಪ್ಪಾಲ ವಂದಿಸಿದರು. ಪಿ.ಎ.ಮರ್ದಾಳ ನಿರೂಪಿಸಿದರು.