

ಸಂದೀಪ್ ಸಾಲ್ಯಾನ್ ಬಂಟ್ವಾಳ
ಜಕ್ರಿಬೆಟ್ಟುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲೇ ಇರುವ ನೇತ್ರಾವತಿ ನದಿಗೆ ನಿರ್ಮಾಣವಾಗುತ್ತಿರುವ ಹೊಸ ಬ್ರಿಡ್ಜ್ ಕಂ ಬ್ಯಾರೇಜಿನ (ಕಿಂಡಿ ಅಣೆಕಟ್ಟು ಹಾಗೂ ಸೇತುವೆ) ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ನೀರು ಸಂಗ್ರಹ ಆರಂಭಗೊಳ್ಳಲಿದೆ. ಇಲ್ಲಿ ಸಂಗ್ರಹಗೊಳ್ಳುವ ನೀರು ಮಂಗಳೂರು ನಗರ ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಲಿದೆ. ಇದರ ಜತೆಗೆ ನೇತ್ರಾವತಿ ನದಿ ತೀರದಲ್ಲಿರುವ ಕೃಷಿಕರಿಗೂ ಪ್ರಯೋಜನವಾಗಲಿದೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಬಾವಿ, ಕೆರೆ, ಕೊಳವೆ ಬಾವಿಗಳಲ್ಲೂ ನೀರಿನ ಒರತೆ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಿದೆ.
ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. 2022ರ ನವೆಂಬರ್‌ನಲ್ಲಿ ಅಂದಿನ ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಶಿಲಾನ್ಯಾಸ ನೆರವೇರಿಸಿದ್ದರು. ಕಳೆದ ವರ್ಷವೇ ಸೇತುವೆಯ ನಿರ್ಮಾಣ ಕೆಲಸ ಪೂರ್ಣಗೊಂಡಿತ್ತು. ಜೂನ್‌ನಲ್ಲಿ ಇಲಾಖೆ ಗೇಟ್ ಅಳವಡಿಸಿ ಪ್ರಾಯೋಗಿಕ ಪ್ರಯೋಗ ನಡೆಸಿತ್ತು. ಈ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸಲು ಸಿದ್ಧತೆ ನಡೆಸಲಾಗಿದೆ.
ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ಉದ್ದ 351.25 ಮೀ. ಹಾಗೂ 5.50 ಮೀ. ಎತ್ತರವಿದ್ದು, ಪೂರ್ತಿ ಗೇಟ್ ಅಳವಡಿಸಿದರೆ 166 ಎಂಸಿಎಫ್‌ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ. ಸೇತುವೆಯ ಅಗಲ 7.50 ಮೀ. ಇದ್ದು, ಒಟ್ಟು 21 ಕಿಂಡಿಗಳಿವೆ. 12 ಮೀ. ಅಗಲದ ವರ್ಟಿಕಲ್ ಲಿಫ್ಟ್‌ಗೇಟ್‌ಗಳಿದ್ದು, ಮಧ್ಯದಲ್ಲಿ ಎರಡು ಸ್ಕವರ್ ಸ್ಲೂಯಿಸ್ ಗೇಟ್‌ಗಳಿರುತ್ತವೆ.
ತುರ್ತು ಪ್ರವಾಹದ ಸಂದರ್ಭ ನೀರನ್ನು ಕೆಳಕ್ಕೆ ಕಳುಹಿಸುವ ಉದ್ದೇಶದಿಂದ ಸ್ಕವರ್ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಇದು ಲಿಫ್ಟ್‌ಗೇಟ್‌ಗಳಿಗಿಂತ ತೀರಾ ಕೆಳಸ್ತರದಲ್ಲಿರುತ್ತದೆ. ಹೀಗಾಗಿ ತಳಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಹೊರಕ್ಕೆ ಕಳುಹಿಸಲು ಅನುಕೂಲವಾಗುವ ದೃಷ್ಟಿಯಿಂದ ಈ ಗೇಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕಿಂಡಿ ಅಣೆಕಟ್ಟಿನ ಗೇಟ್ ಹಾಕಿದ ಸಂದರ್ಭದಲ್ಲಿ ಹಿನ್ನೀರು ಖಾಸಗಿ ಭೂಮಿಗಳಿಗೆ ನುಗ್ಗದಂತೆ ನರಿಕೊಂಬು ಭಾಗದಲ್ಲಿ ಕಲ್ಲು ಹಾಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ಐದಾರು ದಿನಗಳಲ್ಲಿ ಅದರ ಕೆಲಸ ಪೂರ್ಣಗೊಳ್ಳುತ್ತದೆ. ಪೂರ್ಣಗೊಂಡ ತತ್‌ಕ್ಷಣ ಗೇಟ್ ಅಳವಡಿಸಿ ನೀರು ಸಂಗ್ರಹಿಸಲಿದ್ದೇವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನಗರ-ಗ್ರಾಮ ಸಂಪರ್ಕ ಕೊಂಡಿ
ಡ್ಯಾಂ ಜತೆಗೆ ಸೇತುವೆಯೂ ಇರುವುದರಿಂದ ನಗರ ಪ್ರದೇಶ ಹಾಗೂ ಗ್ರಾಮಗಳನ್ನು ಬೆಸಯಲಿದೆ. ಧರ್ಮಸ್ಥಳ-ಬಂಟ್ವಾಳ ಜಕ್ರಿಬೆಟ್ಟುವಿನಲ್ಲಿ ಸೇತುವೆ ನಿರ್ಮಾಣಗೊಂಡಿದ್ದು, ಸೇತುವೆಯ ಇನ್ನೊಂದು ಬದಿಯಲ್ಲಿ ನರಿಕೊಂಬು, ಶಂಭೂರು, ಬಾಳ್ತಿಲ, ಸಣ್ಣಕುಕ್ಕು ಮೂಲಕ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸೇರಲಿದೆ. ಹೊಸ ಸೇತುವೆಯಲ್ಲಿ 7.50 ಮೀ. ಅಗಲದಲ್ಲಿ ವಾಹನ ಸಾಗುವುದಕ್ಕೆ ಅವಕಾಶವಿದ್ದು, ಜಕ್ರಿಬೆಟ್ಟು ಭಾಗದಲ್ಲಿ 50 ಮೀ. ಹಾಗೂ ನರಿಕೊಂಬು ಭಾಗದಲ್ಲಿ 100 ಮೀ.ನಷ್ಟು ಉದ್ದದ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ. ನರಿಕೊಂಬು ಭಾಗದಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಜಕ್ರಿಬೆಟ್ಟು ಭಾಗದಲ್ಲಿ ರಸ್ತೆ ನೇರ ಸಂಪರ್ಕಕ್ಕೆ ಭೂಮಿ ಲಭ್ಯವಾಗಿಲ್ಲ. ಹೀಗಾಗಿ ಜಾಕ್‌ವೆಲ್ ಬಳಿಯ ರಸ್ತೆಯನ್ನು ಅಭಿವೃದ್ಧಿಪಡಿಸಿ ಸೇತುವೆ ಸಂಪರ್ಕಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ .
ನದಿದಂಡೆಯಲ್ಲಿ ಕಲ್ಲು ಹಾಸುವ ಪ್ರಕ್ರಿಯೆ ನಡೆಯುತ್ತಿದೆ. ಬಳಿಕ ಗೇಟ್ ಹಾಕಿ ನೀರು ಸಂಗ್ರಹಿಸಲಾಗುವುದು. ನರಿಕೊಂಬು ಭಾಗದಲ್ಲಿ ಸೇತುವೆ ಸಂಪರ್ಕಕ್ಕೆ ಬಹುತೇಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಕ್ರಿಬೆಟ್ಟು ಭಾಗದಲ್ಲಿ ಜಾಕ್‌ವೆಲ್ ಬಳಿಯ ರಸ್ತೆಯನ್ನೇ ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಯುತ್ತಿದೆ. ಶಿವಪ್ರಸನ್ನ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ https://www.vijayavani.net/2-lakhs-assistance-to-kombaru-temple https://www.vijayavani.net/https-www-vijayavani-net-kajur-urus-celebrationnational-voters-day-7