

ಮಂಗಳೂರು : ನಾನು ತುಳುನಾಡಿನವ, ತುಳು ನನ್ನ ಮಾತೃಭಾಷೆ. ತುಳುವ ಎನ್ನುವುದೇ ನನಗೆ ಹೆಮ್ಮೆ. ಮಾತೃಭಾಷೆ ಮೇಲಿನ
ಪ್ರೀತಿಯಿಂದ ‘ಜೈ’ ತುಳು ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದರು.
ರೂಪೇಶ್ ಶೆಟ್ಟಿ ನಿರ್ದೇಶನ, ಅಭಿನಯದ ‘ಜೈ ’ ತುಳು ಸಿನೆಮಾದ ಚಿತ್ರೀಕರಣದ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಳು ಭಾಷೆಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಹಾಗಾಗಿ ತುಳು ಚಿತ್ರರಂಗಕ್ಕೂ ಉಜ್ವಲ ಭವಿಷ್ಯವಿದೆ ಎಂದರು.
ಮಲಯಾಳಂ, ಬೆಂಗಾಳಿ ಮತ್ತು ಮರಾಠಿ ಸಿನಿಮಾಗಳು ಪ್ರಾದೇಶಿಕವಾಗಿಯೇ ಮೂಡಿ ಜಾಗತಿಕವಾಗಿ ಸಾಧನೆ ಮಾಡಿವೆ. ಅವು ಬಜೆಟ್ ಮೂಲಕ ಗುರುತಿಸಿದ ಸಿನೆಮಾಗಳಲ್ಲ. ಬದಲಾಗಿ ವಿಷಯ ಆಧಾರಿತವಾಗಿ ಮೂಡಿದ ಸಿನೆಮಾಗಳು ತುಳು ಭಾಷೆಯ ಸಿನೆಮಾಕ್ಕೂ ಇಂತಹ ಅವಕಾಶವಿದೆ. ತುಳು ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಆಸೆ ಹಿಂದಿನಿಂದಲೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾದ ಕಥೆ ಕೇಳಿ ಇಷ್ಟಪಟ್ಟು ನಟಿಸುತ್ತಿದ್ದೇನೆ ಎಂದು ಅವರು ಹೇಳಿದರು.
ತುಳುನಾಡಿನ ಸಂಸ್ಕೃತಿ, ಜಾಗ ಅದ್ಭುತ. ಬೇರೆ ಸಿನೆಮಾದವರಿಗೂ ಚಿತ್ರೀಕರಣಕ್ಕೆ ಉತ್ತಮ ಅವಕಾಶವಿದೆ. ತುಳು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿದ್ದೇನೆ. ಹಿಂದೆ ಸಾಕಷ್ಟು ಅವಕಾಶ ಸಿಕ್ಕಿತ್ತಾದರೂ ನಟಿಸಲು ಸಾಧ್ಯವಾಗಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ತುಳು ಕಾಮಿಡಿ ಚಿತ್ರ ಮಾಡುವ ಆಸೆ ಇದೆ. ಕಾಮಿಡಿ ಎನ್ನುವುದು ಯೂನಿವರ್ಸಲ್ ಭಾಷೆ, ಹಾಗಾಗಿ ಕಾಮಿಡಿ ನನ್ನ ಆಯ್ಕೆಯಾಗಿದೆ ಎಂದರು.
ಬಾಲಿವುಡ್‌ನ ಜನಪ್ರಿಯ ನಟ ಸುನೀಲ್ ಶೆಟ್ಟಿ ಜೈ ತುಳು ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಮ್ಮ ಭಾಗ್ಯ. ಈಗ ಮಂಗಳೂರಿನಾದ್ಯಂತ ಶೂಟಿಂಗ್ ನಡೆಯುತ್ತಿದ್ದು ಸುನೀಲ್ ಶೆಟ್ಟಿ ಇನ್ನು ಕೆಲವು ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಮೂರನೇ ಹಂತದ ಚಿತ್ರೀಕರಣ ೀಗ ನಡೆಯುತ್ತಿದ್ದು, ಬಳಿಕ ಹಾಡಿನ ಚಿತ್ರೀಕರಣ ನಡೆಯಲಿದೆ. ಜೈ ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್‌ನ ಸಿನಿಮಾ ಆಗಿದ್ದು ಜಿಲ್ಲೆಯ ಖ್ಯಾತನಾಮ ಕಲಾವಿದರು ಸಿನಿಮಾದಲ್ಲಿದ್ದಾರೆ ಎಂದು ನಟ, ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದರು. ನಿರ್ಮಾಪಕ ಮಂಜುನಾಥ್ ಅತ್ತಾವರ ಉಪಸ್ಥಿತರಿದ್ದರು.