ನನಗೆ ವಿಧಾನಸಭೆ ಟಿಕೆಟ್ ತಪ್ಪಲು ಬಿ. ಎಲ್. ಸಂತೋಷ್ ಅವರೇ ಕಾರಣ; ಕಣ್ಣೀರು ಹಾಕಿದ ಜಗದೀಶ್ ಶೆಟ್ಟರ್

jagadish shettar
Published on

ಹುಬ್ಬಳ್ಳಿ: ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ತಪ್ಪಲು ಕೆಲವು ನಾಯಕರು ಕಾರಣರಾಗಿದ್ದಾರೆ. ನನಗೆ ಟಿಕೆಟ್ ಕೈತಪ್ಪಲು ಬಿ ಎಲ್ ಸಂತೋಷ್ ಕಾರಣ ಎಂದು ಮಾಜಿ ಸಿಎಂ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ. ಪಕ್ಷವನ್ನ ಮುಗಿಸುವ ತಂತ್ರವನ್ನ ಹೆಣೆಯುತ್ತಿದ್ದಾರೆ.ಇವರಿಂದಾಗಿಯೇ ಪಕ್ಷ ನಶಿಸಿ ಹೋಗುತ್ತಿದೆ ಎಂದು ಬಿಜೆಪಿ ನಡೆಯಿಂದ ಶೆಟ್ಟರ್ ಕಣ್ಣೀರು ಹಾಕಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಬಿ. ಎಲ್. ಸಂತೋಷ್ ಅವರೇ ನನಗೆ ವಿಧಾನಸಭೆ ಟಿಕೆಟ್ ತಪ್ಪಲು ನೇರ ಕಾರಣ. ಅವರು ತಮ್ಮ ಮಾನಸ ಪುತ್ರ ಮಹೇಶ ಟೆಂಗಿನಕಾಯಿಗೆ ಹುಧಾ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೊಡಿಸುವುದಕ್ಕಾಗಿ ನನಗೆ ಬಿಜೆಪಿ ಯಿಂದ ಹೊರಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು. ಬಿ.ಎಲ್. ಸಂತೋಷ ಅವರಿಗೆ ಟೆಂಗಿನಕಾಯಿ ಮೇಲೆ ಪ್ರೀತಿ ಇದ್ದಿದ್ದರೆ ಅವರನ್ನೇ ರಾಜ್ಯಸಭಾ ಸದಸ್ಯರನ್ನಾಗಿ ಮಾಡಬಹುದಿತ್ತು. ರಾಜ್ಯ ಬಿಜೆಪಿ ಕೆಲವರ ಕೈಯಲ್ಲಿ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಲ್ಹಾದ ಜೋಶಿ ಅವರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಓಡಾಡಿದೆ. ಅವರು ಸಹ ನನಗೆ ಟಿಕೆಟ್ ಕೊಡಿಸಲು ಗಟ್ಟಿ ನಿಲುವು ತಾಳಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸಹ ಗಟ್ಟಿಯಾಗಿ ನನಗೆ ಟಿಕೆಟ್ ಕೊಡಿಸುವ ಬಗ್ಗೆ ಮಾತನಾಡಲಿಲ್ಲ. ನನ್ನ ಪರ ಚುನಾವಣೆ ಪ್ರಚಾರಕ್ಕಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಬರಲಿದ್ದಾರೆ. ಕಾಂಗ್ರೆಸ್ ಗೆಲ್ಲಿಸುವುದಕ್ಕಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇವರೆಲ್ಲರಿಗೂ ಬಿಜೆಪಿ ಅಧಿಕಾರಕ್ಕೆ ಬರುವ ಮನಸ್ಸೇ ಇಲ್ಲ ಎಂದು ಭಾಸವಾಗುತ್ತದೆ. ಬಿ.ಎಲ್.ಸಂತೋಷ ಅವರಿಗೆ ಕೇರಳ, ತಮಿಳುನಾಡು, ತೆಲಂಗಾಣ ಹೀಗೆ ಪ್ರತಿಯೊಂದು ರಾಜ್ಯಕ್ಕೆ ಉಸ್ತುವಾರಿ ಮಾಡಿದ್ದಾರೆ. ಯಾವುದೇ ರಿಸಲ್ಟ್ ಬರಲಿಲ್ಲ. ಪಕ್ಷ ಹಾಳಾಗುವ ಮುನ್ಸೂಚನೆ ಇದ್ದರೂ ಅವರನ್ನ ನಂಬಿಕೊಂಡು ಉಸ್ತುವಾರಿ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇಡೀ ರಾಜ್ಯದಲ್ಲಿ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿದೆ. ಇದರಿಂದಲೇ ಪಕ್ಷ ಹಾಳಾಗುತ್ತಿದೆ.ಇವರ ಹಿಂದೆ ನಾವು ಸಣ್ಣವರ ಹಾಗೆ ಕುಳಿತುಕೊಳ್ಳಬೇಕು. ಕಳೆದ ಮೂರು ವರ್ಷಗಳಲ್ಲಿ ಕೋರ್ ಕಮೀಟಿಯಲ್ಲಿ ನನಗೆ ಒಂದೇ‌ ಒಂದು ನಿಮಿಷ ಮಾತನಾಡುವ ಅವಕಾಶ ಕೊಟ್ಟಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ ಎಂದು ಬೇಸರ ಹೊರ ಹಾಕಿದ್ದಾರೆ.

ಕಟೀಲ್ ಅವರ ಅವಧಿ ಮುಗಿದರೂ ಅಧ್ಯಕ್ಷರನ್ನ ಬದಲಾವಣೆ ಮಾಡಲಾಗಿಲ್ಲ. ಬಿ.ಎಲ್.ಸಂತೋಷ ಅವರ ಗೇಮ್ ಪ್ಲಾನ್ ಈಗ ವರ್ಕೌಟ್ ಆಗುತ್ತಿದೆ. ಇದರಿಂದ ಪಕ್ಷಕ್ಕೆ ನಷ್ಟ ಆಗುತ್ತಿದೆ. ಸಂತೋಷ ಅವರ ಮಾನಸಪುತ್ರ ಮಹೇಶ ಟೆಂಗಿನಕಾಯಿ, ಪ್ರಹ್ಲಾದ್ ಜೋಶಿಯವರು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಜೋಶಿಯವರೂ ಸಹ ವರಿಷ್ಠರ ಗಮನಕ್ಕೆ ತರಲಾಗಿಲ್ಲ. ಜೋಶಿಯವರಿಗೆ ಗಟ್ಟಿಯಾಗಿ ಹೇಳಲು ಆಗಲಿಲ್ಲ.ಜನತೆಗೆ ಉತ್ತರ ಕೊಡಬೇಕು. ಹೀಗಾಗಿ ಮನಸ್ಸಿಗೆ ವೇದನೆಯಾಗಿ ಪಕ್ಷ ತೊರೆದಿದ್ದೇನೆಯಡಿಯೂರಪ್ಪ, ಅನಂತಕುಮಾರ ಹೀಗೆ ಎಲ್ಲರ ಶ್ರಮ ಬಹಳಷ್ಟಿದೆ. ಬಿಜೆಪಿ ನಡೆಸಿಕೊಂಡ ರೀತಿ ಬಗ್ಗೆ ಶೆಟ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net