ಪೀಠಾಧಿಪತಿಗಳು ಸ್ಥಾವರಕ್ಕಂಟಿಕೊಳ್ಳಬಾರದು; ಬಿ.ಎಲ್.ಶಂಕರ್ ವ್ಯಾಖ್ಯಾನ, ಸಿರಿಗೆರೆ ಹಿರಿಯ ಶ್ರೀಗಳಿಗೆ ಶ್ರದ್ಧಾಂಜಲಿ

tarala
Published on

ಬೆಂಗಳೂರು: ಪೀಠಾಧಿಪತಿಗಳು, ಜಗದ್ಗುರುಗಳೆಂದರೆ ಜಂಗಮ ಸ್ವರೂಪಿಗಳು. ಅವರು ಸ್ಥಾವರ ಪೀಠಕ್ಕೆ ಅಂಟಿಕೊಳ್ಳಬಾರದು ಎಂದು ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್ ವ್ಯಾಖ್ಯಾನಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಿರಿಗೆರೆ ಮಠದ ತರಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುವಂದನಾ ಭಾಷಣ ಮಾಡಿದರು.

ಪೀಠಾಧಿಪತಿಗಳೆಂದರೆ ಸಮಾಜದ ಅಂಕು-ಡೊಂಕುಗಳನ್ನ ತಿದ್ದುವ ಮಾರ್ಗದರ್ಶಕರು. ರಾಷ್ಟ್ರಕವಿ ಕುವೆಂಪುರವರು ಹೇಳಿರುವಂತೆ ಅಲ್ಪ ಮಾನವರನ್ನು ವಿಶ್ವಮಾನವರನ್ನಾಗಿಸಲು ಗುರು-ಪೀಠಗಳ ಅಗತ್ಯವಿದೆ. ಆದರೆ ಅಂತಹ ಗುರುಪೀಠವನ್ನೇರಿದವರು ಸ್ವಾರ್ಥ ರಹಿತವಾಗಿರಬೇಕು. ಸಂವಾದ ಇಲ್ಲದಿದ್ದರೆ ಸರ್ವಾಧಿಕಾರವಾಗುತ್ತದೆ. ಜನಶಕ್ತಿ ಮತ್ತು ಆತ್ಮಸಾಕ್ಷಿಗಿಂತ ದೊಡ್ಡ ನ್ಯಾಯಾಲಯವಿಲ್ಲ. ತ್ಯಾಗದಿಂದ ವಿಶ್ವಮನ್ನಣೆ ಗಳಿಸಲು ಸಾಧ್ಯ. ಸಿರಿಗೆರೆ ಮಠದ ವಿಷಯದಲ್ಲಿ ಎದ್ದಿರುವ ವಿವಾದವನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದ, ಆಗಮ, ಉಪನಿಷತ್ತು, ರಾಮಾಯಣ, ಮಹಾಭಾರತ ಎಲ್ಲವೂ ಉತ್ತಮ ಸಂದೇಶಗಳಿಂದ ಒಳಗೊಂಡಿದ್ದು, ಆ ಉಪದೇಶಗಳನ್ನು ಜಾರಿಗೆ ತರುವಲ್ಲಿ ಕೆಲ ಲೋಪಗಳು ಉಂಟಾಗಿವೆ. ಇದರಿಂದಾಗಿ ಮಹಿಳೆಯರು, ಶೂದ್ರರು ಎಂಬ ನಿರ್ಬಂಧವನ್ನು ವಿಧಿಸಿದ್ದಾರೆ. ಇದನ್ನು ಮೀರಿ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಮಹಾತ್ಮರನೇಕರು ಭಾರತದಲ್ಲಿ ಆಗಿ ಹೋಗಿದ್ದಾರೆ. ಬುದ್ಧ, ಮಹಾವೀರ, ಬಸವ ಇತ್ಯಾದಿ ಸತ್ಪುರುಷರು ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅಂತಹ ಬಸವಾದಿ ಶರಣರ ತತ್ವ ಸಂದೇಶದ ಅಡಿಯಲ್ಲಿ ಕ್ರಾಂತಿ ಮಾಡಿದವರು ಸಿರಿಗೆರೆ ಶ್ರೀ ಶಿವಕುಮಾರ ಸ್ವಾಮಿಗಳು. ಇತರೆ ಹುದ್ದೆಗಳಂತೆ ಪೀಠಾಧಿಪತಿ ಹುದ್ದೆಗೂ ನಿವೃತ್ತಿ ಎಂಬ ಹೊಸ ಪರಿಕಲ್ಪನೆಯನ್ನು ನೀಡಿ ಹೊಸ ಪದ್ದತಿಗೆ ಮುನ್ನುಡಿ ಬರೆದಿದ್ದರು ಎಂದು ಶ್ರೀ ಶಿವಕುಮಾರಸ್ವಾಮಿಗಳು ನಡೆದು ಬಂದ ದಾರಿಯನ್ನು ಸ್ಮರಿಸಿದರು.

ಸಮಾರಂಭದಲ್ಲಿ ಸಿರಿಗೆರೆಯ ಶ್ರೀಸಿದ್ದಯ್ಯ ಸ್ವಾಮೀಜಿ, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಸದಾನಂದಯ್ಯ, ಅಭಾವೀಮ ಉಪಾಧ್ಯಕ್ಷ ಅಣಬೇರು ರಾಜಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿ.ಸಿ.ರಾಜಪ್ಪ, ಸಮಾಜದ ಮುಖಂಡರಾದ ಸಿದ್ದಪ್ಪ, ಪಿನಾಕಪಾಣಿ ಮತ್ತಿತರರು ಇದ್ದರು.

ಸಿರಿಗೆರೆ ಮಠದ ವಿಷಯದಲ್ಲಿ ಸಮಾಜವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಮಠ, ಮತ್ತು ಮಠದ ಸಂಸ್ಥೆಗಳಲ್ಲಿನ ಅವ್ಯವಸ್ಥೆ ಸರಿಯಾಗಬೇಕೆಂದು ಧ್ವನಿ ಎತ್ತಿದ್ದೇವೆ. ನಮ್ಮನ್ನು ಬಂಡವಾಳ ಇರುವವರು, ಮಠದ ವಿರೋಧಿಗಳು ಎಂದು ಟೀಕಿಸಲಾಗುತ್ತಿದೆ. ಆದರೆ ನಾವ್ಯಾರೂ ಮಠದ ವಿರೋಧಿಗಳಲ್ಲ. ನಾವು ಅಪ್ಪಟ ಸಿರಿಗೆರೆ ಮಠದ ಭಕ್ತರು. ಈ ವ್ಯವಸ್ಥೆ ಸರಿಯಾಗುವವರೆಗೆ ಹೋರಾಟ ಮಾಡುತ್ತೇವೆ.

-ಬಿ.ಸಿ.ಪಾಟೀಲ್, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net