More

    ಗಾಯಗೊಂಡ ಹಿಮಾಲಯಕ್ಕೆ ಸದ್ಯಕ್ಕಂತೂ ನಿದ್ದೆಯಿಲ್ಲ

    ಗಾಯಗೊಂಡ ಹಿಮಾಲಯಕ್ಕೆ ಸದ್ಯಕ್ಕಂತೂ ನಿದ್ದೆಯಿಲ್ಲವಾಸ್ತವ ಹತೋಟಿ ರೇಖೆಯನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹಾಗೂ ಅದರ ಯಾವುದೇ ಭಾಗದಲ್ಲಿ ಭಾರತಕ್ಕೆ ಯಾವುದೇ ಸಾಮರಿಕ ಅನುಕೂಲತೆ ದೊರೆಯದಂತೆ ನೋಡಿಕೊಳ್ಳುವುದು ಚೀನಾ ಉದ್ದೇಶ. ಇದರಿಂದಾಗಿ ಆಯಕಟ್ಟಿನ ಪ್ರದೇಶಗಳಲ್ಲಿ ತನ್ನ ನಿಯಂತ್ರಣ ಸ್ಥಾಪಿಸಲು ಪ್ರಯತ್ನಿಸುವ ಚಾಳಿಯನ್ನು ದಶಕಗಳಿಂದಲೂ ಮಾಡುತ್ತಲೇ ಬಂದಿದೆ.

    ಇದುವರೆಗಿನ ಮಾನವ ಇತಿಹಾಸದಲ್ಲಿ ಅತ್ಯಂತ ಮಾರಕ ಎನಿಸಿರುವ ಕರೊನಾ ಸೋಂಕಿಗೆ ಚೀನಾ ಸಿಲುಕಿ ಏಳು ತಿಂಗಳೂ, ಭಾರತ ಸಿಲುಕಿ ಐದು ತಿಂಗಳೂ ಕಳೆದಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆಯನ್ನು ಲಕ್ಷಗಳಲ್ಲೂ, ಮೃತರ ಸಂಖ್ಯೆಯನ್ನು ಸಾವಿರಗಳಲ್ಲೂ ಲೆಕ್ಕ ಹಾಕಬಹುದಾದರೆ ಚೀನಾದಲ್ಲಿ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿದೆಯೆನ್ನುವುದು ನಿಶ್ಚಿತ. ಎರಡೂ ದೇಶಗಳ ಅರ್ಥವ್ಯವಸ್ಥೆಗಳಿಗೆ ಭಾರಿ ಹೊಡೆತ ಬಿದ್ದಿದೆ. ಚೀನಾದ ರಫ್ತುಗಳು ಕುಸಿದಿವೆ, ಆದಾಯ ಕುಗ್ಗಿದೆ. ಅದು ಸಾಲದು ಎಂಬಂತೆ ತನ್ನ ಮಹತ್ವಾಕಾಂಕ್ಷಿ ನವವಸಾಹತುಶಾಹಿ ‘ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್’ಗಾಗಿ ಜಗತ್ತಿನಾದ್ಯಂತ ವ್ಯಯಿಸಿದ್ದ ಒಂದು ಟ್ರಿಲಿಯನ್ ಡಾಲರ್​ಗಳ ಅಗಾಧ ಮೊತ್ತ ‘ರೂಪಾಯಿ ಚೆಲ್ಲಿ’ ‘ಚಿಲ್ಲರೆ’ ಆಯ್ದುಕೊಳ್ಳುವಂತಾಗಿದೆ. ಭಾರತದ ಗತಿ ಇಷ್ಟು ಕೆಟ್ಟಿಲ್ಲದಿದ್ದರೂ 2025ರ ಹೊತ್ತಿಗೆ ದೇಶದ ನಿವ್ವಳ ರಾಷ್ಟ್ರೀಯ ಉತ್ಪಾದನೆಯನ್ನು ಐದು ಟ್ರಿಲಿಯನ್ ಡಾಲರ್​ಗಳಿಗೇರಿಸುವ ತಮ್ಮ ಕನಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸದ್ಯಕ್ಕಂತೂ ಮರೆಯಬೇಕಾಗಿದೆ. ಕರೊನಾ ಸೋಂಕು ಎರಡೂ ದೇಶಗಳಲ್ಲಿ ನೆರೆಯಂತೆ ಏರುತ್ತಲೇ ಇದೆ. ಇಂತಹ ಸ್ಥಿತಿಯಲ್ಲಿ ಏಷ್ಯಾದ ಈ ಎರಡು ದೈತ್ಯ ರಾಷ್ಟ್ರಗಳ ನಡುವೆ ಯುದ್ಧ ಅಗತ್ಯವೇ?

    ಗಾಯಗೊಂಡ ಹಿಮಾಲಯಕ್ಕೆ ಸದ್ಯಕ್ಕಂತೂ ನಿದ್ದೆಯಿಲ್ಲಈ ಪ್ರಶ್ನೆಗೆ ಹತ್ತು ದಿನಗಳ ಹಿಂದೆ ಸ್ವಲ್ಪವಾದರೂ ಅರ್ಥವಿತ್ತು. ಈಗಂತೂ ಯಾವ ಅರ್ಥವೂ ಉಳಿದಿಲ್ಲ. ಚೀನಾಗೆ ಯುದ್ಧ ಬೇಕಾಗಿದೆ. ಯುದ್ಧೋತ್ಸಾಹವನ್ನು ಐದು ವಾರಗಳಿಂದಲೂ ಪ್ರದರ್ಶಿಸುತ್ತಲೇ ಇದ್ದ ಅದು ಅದನ್ನು ಜೂನ್ 15ರಂದು ತಾರಕಕ್ಕೊಯ್ದಿದೆ. ಇಂಚಿಂಚಾಗಿ ನಮ್ಮ ಇಡೀ ನೆಲವನ್ನು ತನ್ನ ಮತ್ತು ತನ್ನ ಬಾಲಂಗೋಚಿಗಳ ಕೈವಶಮಾಡಿಕೊಳ್ಳುವ ಉದ್ದೇಶ ಅದರದು. ಇದನ್ನು ತಡೆಯಬೇಕಾದರೆ ಚೀನಾದ ಕ್ರಿಯೆಗೆ ನಾವು ಪ್ರತಿಕ್ರಿಯಿಸಲೇಬೇಕಾಗುತ್ತದೆ. ಇಂತಹ ಸ್ಥಿತಿ ನಿರ್ವಣವಾದದ್ದು ಹೇಗೆ ಮತ್ತು ಮುಂದೇನಾಗಬಹುದು ಎಂಬುದರ ಕುರಿತಾಗಿನ ವಿಶ್ಲೇಷಣೆ ಎರಡು ಭಾಗಗಳ ಈ ಲೇಖನದ ವಸ್ತುವಿಷಯ.

    ಭಾರತದ ಲಡಾಖ್ ಮತ್ತು ಚೀನೀ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳನ್ನು ಬೇರ್ಪಡಿಸುವ ವಾಸ್ತವ ಹತೋಟಿ ರೇಖೆ (ಎಲ್​ಎಸಿ) ಅಸ್ತಿತ್ವಕ್ಕೆ ಬಂದದ್ದು 1962ರ ಯುದ್ಧದ ಪರಿಣಾಮವಾಗಿ. ಉತ್ತರದಲ್ಲಿ ಕಾರಾಕೊರಂ ಕಣಿವೆಯಿಂದ ಆರಂಭವಾಗಿ ಆಗ್ನೇಯಕ್ಕೆ ಸಾಗುತ್ತ ದೌಲತ್ ಬೇಗ್ ಓಲ್ದಿ, ಗಲ್ವಾನ್ ಕಣಿವೆ, ಕೊಂಗ್ಕಾ ಕಣಿವೆ ಮೂಲಕ ಹಾದು ನೈರುತ್ಯಕ್ಕೆ ನಂತರ ದಕ್ಷಿಣಕ್ಕೆ ಹೊರಳಿ ಪಂಗೊಂಗ್ ತ್ಸೋ ಸರೋವರವನ್ನು ಎರಡಾಗಿ ಕತ್ತರಿಸಿ ಚುಶಾಲ್ ಮೂಲಕ ಮತ್ತೆ ಆಗ್ನೇಯಕ್ಕೆ ಹೊರಳಿ ದೆಮ್ೊಕ್​ನತ್ತ ಸಾಗುವ ಈ ರೇಖೆ 1597 ಕಿಲೋಮೀಟರ್ ದೀರ್ಘವಾಗಿದೆ. ಆದರೆ ಈ ರೇಖೆ ಹೇಗೆ ಸಾಗುತ್ತದೆ ಎನ್ನುವ ಬಗ್ಗೆ ಎರಡೂ ದೇಶಗಳ ನಡುವೆ ಒಮ್ಮತವಿಲ್ಲ. ಹೀಗಾಗಿ ಇಲ್ಲಿ ಆಗೊಮ್ಮೆ ಈಗೊಮ್ಮೆ ರೇಖೆಯ ಅತಿಕ್ರಮಣ ನಡೆಯುವುದು ಸಾಮಾನ್ಯ. ಆದರೆ ಈ ಅತಿಕ್ರಮಣ ಹೆಚ್ಚಿಗೆ ಜರುಗುವುದು ಚೀನಾದ ಕಡೆಯಿಂದಲೇ.

    ಹತೋಟಿ ರೇಖೆಯನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹಾಗೂ ಅದರ ಯಾವುದೇ ಭಾಗದಲ್ಲಿ ಭಾರತಕ್ಕೆ ಯಾವುದೇ ಸಾಮರಿಕ ಅನುಕೂಲತೆ ದೊರೆಯದಂತೆ ನೋಡಿಕೊಳ್ಳುವ ಉದ್ದೇಶಗಳಿಂದ ಚೀನಾ ಆಯಕಟ್ಟಿನ ಪ್ರದೇಶಗಳಲ್ಲಿ ತನ್ನ ನಿಯಂತ್ರಣ ಸ್ಥಾಪಿಸಲು ಪ್ರಯತ್ನಿಸುವ ಚಾಳಿಯನ್ನು ದಶಕಗಳಿಂದಲೂ ಮಾಡುತ್ತಲೇ ಬಂದಿದೆ. 1999ರಲ್ಲಿ ಪಂಗೊಂಗ್ ತ್ಸೋ ಸರೋವರ, 2008ರಲ್ಲಿ ಕೊಂಗ್​ಕಾ ಕಣಿವೆ, 2012ರಲ್ಲಿ ದೆಪ್​ಸಂಗ್… ಹೀಗೆ. ಆದರೆ ಈಗಿನ ಚೀನೀ ಅತಿಕ್ರಮಣ ಏಕಕಾಲದಲ್ಲಿ ಮೂರು ಸ್ಥಳಗಳಲ್ಲಿ ಘಟಿಸಿರುವುದು ವಿಶೇಷ ಮತ್ತಿದು ಬೀಜಿಂಗ್​ನ ಆಕ್ರಮಣಕಾರಿ ಯೋಜನೆಯ ಸುಳಿವು ನೀಡುತ್ತದೆ.

    ಇಂದು ಚೀನಾ ಅತಿಕ್ರಮಿಸಿರುವ ಮೂರು ಪ್ರದೇಶಗಳಲ್ಲಿ ದಕ್ಷಿಣದ ಪಂಗೊಂಗ್ ತ್ಸೊ ಸರೋವರ ತೀರ ಹಾಗೂ ಅತಿಕ್ರಮಣಕ್ಕೆ ಯತ್ನಿಸಿದ ಉತ್ತರದ ಗಲ್ವಾನ್ ಕಣಿವೆ ಮುಖ್ಯವಾದುವು ಮತ್ತು ಇವುಗಳಲ್ಲಿ ದಕ್ಷಿಣದ್ದು ಚೀನಾದ ಕಾಕದೃಷ್ಟಿಗೆ ಸಿಲುಕಿ ದಶಕಗಳೇ ಆಗಿವೆ ಹಾಗೂ ಉತ್ತರದ್ದರ ಮೇಲೆ ಕಣ್ಣು ಬಿದ್ದದ್ದು ಇತ್ತೀಚೆಗೆ. ಈ ಉತ್ತರದ ಗಲ್ವಾನ್ ಕಣಿವೆ ಇಂದಿನ ಫ್ಲಾಷ್ ಪಾಯಿಂಟ್. ಇದು ಹೇಗಾಯಿತೆಂದು ನೋಡೋಣ. ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ ಗಡಿಗಳ ರಕ್ಷಣೆ ಆದ್ಯತೆ ಕಳೆದುಕೊಂಡ ಪರಿಣಾಮವಾಗಿ ಚೀನೀಯರು ಹೊಸ ಹೊಸ ಪ್ರದೇಶಗಳಲ್ಲಿ ನಿರಾತಂಕವಾಗಿ ಅತಿಕ್ರಮಣ ಎಸಗಿದ್ದನ್ನು ಕಾಣುತ್ತೇವೆ. ಇವುಗಳಲ್ಲಿ ಒಂದನ್ನಷ್ಟೇ ಇಲ್ಲಿ ಉಲ್ಲೇಖಿಸುತ್ತೇನೆ.

    ಇದನ್ನೂ ಓದಿ: ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?

    2012ರಲ್ಲಿ ಉತ್ತರದ ದೆಪ್​ಸಂಗ್ ಪ್ರದೇಶದಲ್ಲಿ ನಡೆದ ಪ್ರಕರಣವಂತೂ ದೊಡ್ಡ ದುರಂತವೇ ಸರಿ. ಏಪ್ರಿಲ್ 15ರಂದು ಐವತ್ತು ಚೀನೀ ಸೈನಿಕರ ತುಕಡಿಯೊಂದು ಅತಿ ಉತ್ತರದಲ್ಲಿರುವ ಭಾರತೀಯ ಸೇನಾಠಿಕಾಣೆ ದೌಲತ್ ಬೇಗ್ ಓಲ್ದಿಗೆ ಹೊಂದಿಕೊಂಡಂತಿರುವ ದೆಪ್​ಸಂಗ್ ಬಯಲುಪ್ರದೇಶದಲ್ಲಿ 19 ಕಿಲೋಮೀಟರ್​ಗಳಷ್ಟು ಪಶ್ಚಿಮಕ್ಕೆ ಮುಂದೊತ್ತಿ ಬಂತು. ಆಗ ಇನ್ನೊಂದು ವರ್ಷದಲ್ಲಿ ಚುನಾವಣೆಗಳನ್ನು ಎದುರಿಸಬೇಕಾಗಿದ್ದ ಯುಪಿಎ ಅದಾಗಲೇ ಮೈತುಂಬ ಸುತ್ತಿಕೊಂಡಿದ್ದ ಹಗರಣಗಳ ಜತೆ ಈ ಬಿಕ್ಕಟ್ಟನ್ನೂ ತಲೆಯ ಮೇಲೆ ಎಳೆದುಕೊಳ್ಳಲು ಹೆದರಿತು. ಇಡೀ ಪ್ರಕರಣವನ್ನು ಭಾರತೀಯರ ಮನಸ್ಸಿನಿಂದ ಮರೆಯಿಸಿಬಿಡುವ ಉದ್ದೇಶದಿಂದ ಮಾಡಿಕೊಂಡ ಒಳಒಪ್ಪಂದದ ಪ್ರಕಾರ ದೆಪ್​ಸಂಗ್​ನಿಂದ ಚೀನೀ ಸೈನಿಕರ ವಾಪಸಾತಿಗೆ ಪ್ರತಿಯಾಗಿ ಹತ್ತಿರದಲ್ಲಿದ್ದ ನಮ್ಮದೇ ಚುಮರ್​ನಲ್ಲಿ ನಮ್ಮ ಸೈನಿಕರು (ಚೀನೀ ಸೇನೆಯ ಅತಿಕ್ರಮಣದ ನಂತರ) ನಿರ್ವಿುಸಿದ್ದ ಬಂಕರ್ ಒಂದನ್ನು ತೆರವುಗೊಳಿಸಿ ಪಶ್ಚಿಮಕ್ಕೆ ಸರಿಯಲು ಭಾರತೀಯ ಸೇನೆ ಸಮ್ಮತಿಸಬೇಕಾಯಿತು. ಇಲ್ಲಿ ಆತಂಕಕಾರಿ ವಿಷಯವೆಂದರೆ ಭಾರತೀಯ ಸೇನೆಯೂ ಪಶ್ಚಿಮಕ್ಕೆ ಹಿಂದೆ ಸರಿಯುವುದಾದರೆ ‘ನಿರ್ವನುಷ ಪ್ರದೇಶ’ ನಿರ್ವಣವಾದದ್ದು ಭಾರತೀಯ ನೆಲದಲ್ಲಿ!

    ಹತೊಟಿ ರೇಖೆಯಲ್ಲಿ ನಮ್ಮ ಸಂಪರ್ಕ ಸಾರಿಗೆ ವ್ಯವಸ್ಥೆ ಸೂಕ್ತ ಪ್ರಮಾಣದಲ್ಲಿ ಇಲ್ಲದಿರುವುದೇ ಚೀನೀಯರ ಅತಿಕ್ರಮಣವನ್ನು ನಾವು ಸಮರ್ಥವಾಗಿ ಎದುರಿಸಲು ಆಗದಿರಲು ಕಾರಣ ಎಂದು ಗುರುತಿಸಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಗಡಿ ರಸ್ತೆಗಳನ್ನು ನಿರ್ವಿುಸಲು ಮನಸ್ಸು ಮಾಡಿದರು. ಆದರೆ ಅವರದೇ ಮಂತ್ರಿಮಂಡಲದ ಕೆಲವು ಸದಸ್ಯರಿಂದ ಬಂದ ವಿರೋಧದಿಂದಾಗಿ ಸಿಂಗ್ ತಮ್ಮ ಯೋಜನೆಯನ್ನು ಕೈಬಿಡಬೇಕಾಯಿತು. ಪರಿಸ್ಥಿತಿ ಬದಲಾದದ್ದು ಮೋದಿ ಸರ್ಕಾರ ಬಂದಾಗ. ಅಧಿಕಾರಕ್ಕೆ ಬಂದ ಅನತಿ ಕಾಲದಲ್ಲೇ ಸಂಬಂಧಿತ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಗಡಿಯಲ್ಲಿ ಆಯಕಟ್ಟಿನ ರಸ್ತೆಗಳ ನಿರ್ವಣಕ್ಕೆ ಮತ್ತೆಮತ್ತೆ ಅನುಮತಿಗೆ ಕಾಯುತ್ತ ಕೂರದೇ ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುವ ಸ್ವಾತಂತ್ರ್ಯವನ್ನು ಬಾರ್ಡರ್ ರೋಡ್ ಆರ್ಗನೈಝೇಷನ್​ಗೆ ಹೊಸ ಸರ್ಕಾರ ನೀಡಿತು.

    ಇದನ್ನೂ ಓದಿ: 10,000ದ ಸನಿಹಕ್ಕೆ ಕೋವಿಡ್-19 ಕೇಸ್​: ಬೆಂಗಳೂರಿನಲ್ಲೇ ಅಧಿಕ 107 ಪ್ರಕರಣ

    ಪರಿಣಾಮವಾಗಿ ದರ್ಪಕ್​ನಿಂದ ಹೊರಟು ಶೈಯೋಕ್, ಗಲ್ವಾನ್ ಕಣಿವೆ, ಮರ್ಗೇ, ದೆಪ್​ಸಂಗ್ ಮೂಲಕ ಸಾಗಿ ದೌಲತ್ ಬೇಗ್ ಓಲ್ದಿ ಸೇರುವ, ‘ಡಿಎಸ್​ಡಿಬಿಓ ರಸ್ತೆ’ ಎಂದು ಕರೆಯಲಾಗುವ 255 ಕಿಲೋಮೀಟರ್ ಉದ್ದದ ರಸ್ತೆಯ ನಿರ್ವಣವನ್ನು ಬಿಆರ್​ಓ ಕೈಗೆತ್ತಿಕೊಂಡಿತು. ಇಂದು ಚೀನಾದ ನಿದ್ದೆಗೆಡಿಸಿರುವುದು ಮುಕ್ತಾಯದ ಹಂತದಲ್ಲಿರುವ ಈ ರಸ್ತೆ. ಇದು ಸಂಪೂರ್ಣವಾದರೆ ಎಂಟು ವರ್ಷಗಳ ಹಿಂದೆ ದೆಪ್​ಸಂಗ್​ನಲ್ಲಿ ಮಾಡಿದ ಹರಕತ್ ಅನ್ನು ಪುನರಾವರ್ತಿಸುವುದು ಚೀನಾಗೆ ಸಾಧ್ಯವಾಗುವುದಿಲ್ಲ.

    ಚೀನಾ ವಾಸ್ತವ ಹತೋಟಿ ರೇಖೆಯುದ್ದಕ್ಕೂ ತನ್ನ ಕಡೆಯಲ್ಲಿ ಆಯಕಟ್ಟಿನ ರಸ್ತೆಗಳನ್ನು ನಿರ್ವಿುಸಿಕೊಂಡಿದೆ. ಅಂತಹದೇ ರಸ್ತೆಗಳನ್ನು ಭಾರತವೂ ನಿರ್ವಿುಸಿಕೊಂಡು ತನ್ನ ಮೇಲುಗೈಗೆ ಸೆಡ್ಡು ಹೊಡೆಯುವುದನ್ನು ತಡೆಯಬೇಕೆನ್ನುವುದು ಚೀನೀ ಇರಾದೆ. ಡಿಎಸ್​ಡಿಬಿಓ ರಸ್ತೆಯ ಭಾಗವಾಗಿ ಗಲ್ವಾನ್ ನದಿಯ ಮೇಲೆ 60 ಮೀಟರ್ ಉದ್ದದ ಸೇತುವೆಯನ್ನು ಭಾರತ ನಿರ್ವಿುಸಿದ್ದು ಚೀನೀ ಗೂಳಿಯ ಮುಂದೆ ಭಾರತ ಬೀಸಿದ ಕೆಂಪು ಅರಿವೆ.

    ಭಾರತವನ್ನು ಧೃತಿಗೆಡಿಸುವ ಉದ್ದೇಶದಿಂದ ಮೇ 6ರಂದು ಗಲ್ವಾನ್ ಕಣಿವೆಯಲ್ಲಿ ಮುಂದೊತ್ತಿ ಬಂದ ಚೀನೀ ಸೇನೆ ಯುದ್ಧದ ತಯಾರಿಯಲ್ಲಿರುವಂತೆ ಎಲ್​ಎಸಿಯ ತನ್ನ ಕಡೆ ಕಂದಕಗಳನ್ನೂ, ಬಂಕರ್​ಗಳನ್ನೂ ನಿರ್ವಿುಸತೊಡಗಿತು. ಇದರಿಂದ ಉಂಟಾದ ಉದ್ರಿಕ್ತ ಸ್ಥಿತಿಯ ಶಮನಕ್ಕಾಗಿ ಜೂನ್ 6ರಂದು ನಡೆದ ಮೇಜರ್ ಜನರಲ್ ಮಟ್ಟದ ಮಾತುಕತೆಯಲ್ಲಿ ಎಲ್​ಎಸಿಯ ಪಾಯಿಂಟ್ 14ನಲ್ಲಿ ತಾನು ನಿರ್ವಿುಸಿರುವ ನಿರೀಕ್ಷಣಾ ಶಿಬಿರವೊಂದನ್ನು ತೆರವುಗೊಳಿಸಲು ಚೀನಾ ಒಪ್ಪಿಕೊಂಡಿತು ಮತ್ತು ಅದರಂತೆ ತೆರವುಗೊಳಿಸಿತು ಕೂಡ. ಆದರೆ ತೊಂದರೆಯಾದದ್ದು ಆ ಶಿಬಿರ ಜೂನ್ 14ರಂದು ಮತ್ತೆ ಎದ್ದು ನಿಂತಾಗ. ಇದು ಒಪ್ಪಂದದ ಉಲ್ಲಂಘನೆ. ಪರಿಣಾಮವಾಗಿ ಗಲ್ವಾನ್ ಕಣಿವೆಯ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಕರ್ನಲ್ ಸಂತೋಷ್ ಬಾಬು ನೇತೃತ್ವದ 16 ಬಿಹಾರ್ ಇನ್​ಫೆಂಟ್ರಿ ಬೆಟಾಲಿಯನ್ ಜೂನ್ 15ರ ಸಂಜೆ ಪಾಯಿಂಟ್ 14ನತ್ತ ಧಾವಿಸಿತು. ಜೂನ್ 6ರ ಒಪ್ಪಂದವನ್ನು ಚೀನೀಯರಿಗೆ ನೆನಪಿಸುವುದು ಉದ್ದೇಶ. 1996ರಲ್ಲಿ ದೇವೇಗೌಡ ಸರ್ಕಾರ ಮತ್ತು 2005ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಚೀನೀ ಸರ್ಕಾರಗಳೊಂದಿಗೆ ಮಾಡಿಕೊಂಡ ಒಪ್ಪಂದಗಳ ಪ್ರಕಾರ ಗಡಿ ಕಾಯುವ ಎರಡೂ ಕಡೆಯ ಸೈನಿಕರು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬ ನಿಯಮವಿದೆ ಮತ್ತು ಆ ಪ್ರಕಾರ ಭಾರತೀಯ ಸೈನಿಕರು ನಿರಾಯುಧರಾಗಿದ್ದರು.

    ಇದನ್ನೂ ಓದಿ; ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

    ಚೀನೀ ಶಿಬಿರ ತಲುಪಿದ ಭಾರತೀಯ ಸೈನಿಕರಿಗೆ ಅಚ್ಚರಿ ಕಾದಿತ್ತು. ಕಳೆದೊಂದು ತಿಂಗಳಿಂದಲೂ ಆಗಾಗ ಎದುರಿಗೆ ಕಾಣುತ್ತ ಮುಖಪರಿಚಯವಾಗಿದ್ದ, ಆ ಮೂಲಕ ತುಸು ಸ್ನೇಹಭಾವವನ್ನೂ ಮೂಡಿಸಿದ್ದ ಚೀನೀ ಸೈನಿಕರ ಬದಲಾಗಿ ಅಲ್ಲಿದ್ದದ್ದು ಸಂಪೂರ್ಣ ಅಪರಿಚಿತ ಹೊಸ ಮುಖಗಳು. ಇದರರ್ಥ ಚೀನಾ ಅಲ್ಲಿನ ತನ್ನ ಸೈನಿಕರನ್ನು ಏಕಾಏಕಿ ಬದಲಾಯಿಸಿತ್ತು, ಹೊಸ ಸೈನಿಕರ ವರ್ತನೆ ಆಕ್ರಮಣಕಾರಿಯಾಗಿತ್ತು. ಒಪ್ಪಂದಕ್ಕೆ ಬದ್ಧವಾಗಿ ಶಾಂತಿ ಸ್ಥಾಪನೆಯಲ್ಲಿ ಸಹಕರಿಸುವ ಉದ್ದೇಶ ಚೀನೀಯರಿಗಿರಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

    ನಂತರ ಚೀನೀ ಸೈನಿಕರ ಅವಾಚ್ಯ ನಿಂದನೆಗಳ ಪರಿಣಾಮವಾಗಿ ಆರಂಭವಾದ ಮುಷ್ಟಿಯುದ್ಧದಲ್ಲಿ ಭಾರತೀಯ ಸೈನಿಕರು ಮೇಲುಗೈ ಸಾಧಿಸಿ ಚೀನೀಯರು ಒಪ್ಪಂದಕ್ಕೆ ವಿರುದ್ಧವಾಗಿ ನಿರ್ವಿುಸಿದ್ದ ಶಿಬಿರವನ್ನು ಧ್ವಂಸಗೊಳಿಸಿದರು. ಚೀನೀ ಶಿಬಿರ ಜೂನ್ 14ರಂದು ಮತ್ತೆ ಕಾಣಿಸಿಕೊಂಡದ್ದು, 15ರ ಸಂಜೆಯವರೆಗೂ ಇದ್ದದ್ದು, ಆ ನಂತರ ಅದರ ಅವಶೇಷಗಳಷ್ಟೇ ಕಂಡದ್ದು ಇದೆಲ್ಲವನ್ನೂ ಆಯಾ ದಿನಗಳಂದು ಉಪಗ್ರಹಗಳು ತೆಗೆದ ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ. ಅವುಗಳನ್ನು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್​ಸ್ಟಿಟ್ಯೂಟ್​ನ ಉಪಗ್ರಹ ಬೇಹುಗಾರಿಕಾ ವಿಶ್ಲೇಷಕ ನೇಥನ್ ರೂಸರ್ ತಮ್ಮ ವಿಶ್ಲೇಷಣೆಯೊಂದಿಗೆ ಬಿಡುಗಡೆ ಮಾಡಿದ್ದಾರೆ.

    ಚೀನೀ ಶಿಬಿರವನ್ನು ಧ್ವಂಸಗೊಳಿಸಿ ಭಾರತೀಯ ಸೈನಿಕರು ಹಿಂತಿರುಗಿದರೂ ಚೀನೀ ಪಾಳಯದಲ್ಲಿ ಆರಂಭವಾದ ವಿಶೇಷ ಚಲನವಲನಗಳು ಅವರನ್ನಾಕರ್ಷಿಸಿದವು. ಅದನ್ನು ಪರಿಶೀಲಿಸಲು ಕರ್ನಲ್ ಸಂತೋಷ್ ಬಾಬು ನೇತೃತ್ವದ ತುಕಡಿ ಮತ್ತೆ ಅತ್ತ ಧಾವಿಸಿತು. ಆಗ ಅವರನ್ನು ಎದುರುಗೊಂಡದ್ದು ಮೊಳೆಗಳನ್ನು ಜೋಡಿಸಿದ ಉಕ್ಕಿನ ಲಾಠಿಗಳು ಮತ್ತು ಆ ಬಗೆಯ ಇತರ ಮಾರಕಾಸ್ತ್ರಗಳನ್ನು ಹಿಡಿದ ಚೀನೀ ಸೈನಿಕರು. ಗಡಿಯಲ್ಲಿನ ಸೈನಿಕರು ಶಸ್ತ್ರಾಸ್ತ್ರ ಹೊಂದಿರಬಾರದು ಎಂಬ ಒಪ್ಪಂದವನ್ನು ತಿರುಚಿ ಬೀದಿಗೂಂಡಾಗಳಂತೆ ಇಂತಹ ಮಾರಕಾಸ್ತ್ರಗಳನ್ನು ಹಿಡಿದು ನಿಂತ ಚೀನೀ ಸೈನಿಕರು ವೃತ್ತಿಪರ ಸೇನೆಗೇ ಅವಮಾನ.

    ಇದನ್ನೂ ಓದಿ; ಚೀನಾ ಸಂಘರ್ಷದಲ್ಲಿ ಬಲಿಯಾದ ಯೋಧನ ಕುಟುಂಬಕ್ಕೆ ಐದು ಕೋಟಿ ರೂ., ಪತ್ನಿಗೆ ಸಹಾಯಕ ಆಯುಕ್ತೆ ಹುದ್ದೆ 

    ಚೀನೀಯನೊಬ್ಬ ಬೀಸಿದ ಕಲ್ಲು ತಗುಲಿ ಆಯತಪ್ಪಿ ಗಲ್ವಾನ್ ನದಿಗೆ ಬಿದ್ದು ಕರ್ನಲ್ ಸಂತೋಷ್ ಬಾಬು ಮೃತಪಟ್ಟದ್ದರಿಂದ ರೊಚ್ಚಿಗೆದ್ದ 16 ಬಿಹಾರ್ ಇನ್​ಫೆಂಟ್ರಿ ಬೆಟಾಲಿಯನ್​ನ ಸೈನಿಕರು ಚೀನೀಯರೊಂದಿಗೆ ಮತ್ತೆ ಮುಷ್ಟಿಯುದ್ಧಕ್ಕಿಳಿದು, ಅವರ ಮಾರಕಾಸ್ತ್ರಗಳನ್ನು ಸೆಳೆದುಕೊಂಡು ಅವುಗಳನ್ನು ಅವರ ಮೇಲೇ ಪ್ರಯೋಗಿಸಿದರು. ಇಷ್ಟಾಗಿಯೂ ಭಾರತೀಯ ಪಡೆಯಲ್ಲಿ ಹೆಚ್ಚಿನ ಸಾವುನೋವುಗಳಾದವು. ರಾತ್ರಿ 11ರ ಹೊತ್ತಿಗೆ 16 ಬಿಹಾರ್ ಬೆಟಾಲಿಯನ್ ಮತ್ತು 3 ಸಿಖ್ ರೆಜಿಮೆಂಟ್​ನ ‘ಘಾತಕ್ ಪ್ಲಟೂನ್’ಗಳು ಭಾರತೀಯ ಸೈನಿಕರ ಜತೆಗೂಡಿದವು. ಘಾತಕ ಆಕ್ರಮಣ ಮತ್ತು ಹೋರಾಟಕ್ಕೆ ಹೆಸರಾದ ಇವು ಬಂದದ್ದೇ ಘರ್ಷಣೆಯ ಗತಿಯೇ ಬದಲಾಗಿಹೋಯಿತು.

    ಅಂದಿನ ಘರ್ಷಣೆಯಲ್ಲಿ ಭಾರತೀಯ ಸೇನೆಯ 20 ಸೈನಿಕರು ಹುತಾತ್ಮರಾದರು, 76 ಸೈನಿಕರು ಗಾಯಗೊಂಡರು, ಭಾರತೀಯ ಸೇನೆ ಹಿಂತಿರುಗಿಸಿದ 16 ಚೀನೀ ಸೈನಿಕರ ಶವಗಳ ಹೊರತಾಗಿ ಆ ಕಡೆ ಎಷ್ಟು ಸಾವುನೋವುಗಳಾಗಿವೆಯೆಂಬ ವಿವರವನ್ನು ಚೀನೀಯರು ಬಿಡುಗಡೆ ಮಾಡಿಲ್ಲ. ವಿವಿಧ ಮೂಲಗಳು ಮೃತ ಚೀನೀ ಸೈನಿಕರ ಸಂಖ್ಯೆಯನ್ನು 35ರಿಂದ 43ರ ನಡುವೆ ಇಡುತ್ತವೆ.
    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಂಘರ್ಷದ ನಡುವೆ ಸದ್ದಿಲ್ಲದೆ ಚೀನಾಗೆ ಭಾರಿ ತಿರುಗೇಟು ನೀಡಿದೆ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts