More

    ಏಳುಬೀಳಿನ ಹಾದಿಯಲ್ಲಿ ಬಾಂಗ್ಲಾದೇಶ : ಪ್ರೇಮಶೇಖರ ಅವರ ಜಗದಗಲ ಅಂಕಣ

    ಏಳುಬೀಳಿನ ಹಾದಿಯಲ್ಲಿ ಬಾಂಗ್ಲಾದೇಶ : ಪ್ರೇಮಶೇಖರ ಅವರ ಜಗದಗಲ ಅಂಕಣಬಾಂಗ್ಲಾದೇಶದ ವಿಮೋಚನೆಯ ಬಗೆಗಿನ ಕಳೆದ ವಾರದ ಲೇಖನಕ್ಕೆ ಓದುಗರಿಂದ ಬಂದ ಪ್ರತಿಕ್ರಿಯೆಗಳಲ್ಲಿ, ವಿಮೋಚನಾನಂತರದ ಬೆಳವಣಿಗೆಗಳ ಬಗ್ಗೆ ವಿವರವಾದ ಮಾಹಿತಿ ಬೇಕೆಂಬ ಮಾತು ದೊಡ್ಡದಾಗಿಯೇ ಬಂದಿದೆ. ಬಹು ಆಯಾಮದ ಈ ವಿಷಯದ ಬಗ್ಗೆ ಒಂದು ಲೇಖನದಲ್ಲಿ ಹೇಳಲಾಗುವುದಿಲ್ಲ. ಆದಾಗ್ಯೂ, ಸಾಧ್ಯವಾದಷ್ಟು ಮಟ್ಟಿಗಿನ ಪೂರ್ಣ ಚಿತ್ರಣವೊಂದನ್ನು ಮುಂದಿಡಲು ಪ್ರಯತ್ನಿಸಿದ್ದೇನೆ. ಬಾಂಗ್ಲಾದೇಶದ ಆಂತರಿಕ ರಾಜಕಾರಣ ಮತ್ತು ಭಾರತ-ಬಾಂಗ್ಲಾದೇಶ ಸಂಬಂಧಗಳು ಒಂದಕ್ಕೊಂದು ತಳುಕು ಹಾಕಿಕೊಂಡೇ ಸಾಗಿಬರುತ್ತಿರುವುದರಿಂದಾಗಿ ಇವೆರಡನ್ನೂ ಒಟ್ಟೊಟ್ಟಿಗೇ ಅವಲೋಕಿಸುವುದು ಸೂಕ್ತ.

    ಭಾರತದ ಸೇನಾ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ರಾಕ್ಷಸೀ ಕಪಿಮುಷ್ಟಿಯಿಂದ ಹೊರಬಂದ ಬಾಂಗ್ಲಾದೇಶೀಯರು ‘ಅಮಾರ್ ಶೋನಾರ್ ಬಾಂಗ್ಲಾ’ ಎಂದು ಹಾಡಿ ಕುಣಿದದ್ದೇ ಕುಣಿದದ್ದು. ಪಾಕಿಸ್ತಾನದ ಸೋಲಿನೊಡನೆ, ಬಾಂಗ್ಲಾದ ಸ್ವಾತಂತ್ರ್ಯದೊಡನೆ, ‘…ಮುಂದೆ ಅವರೆಲ್ಲಾ ಬಹುಕಾಲ ಸುಖವಾಗಿ ಬಾಳಿದರು’ ಎಂದು ಮುಕ್ತಾಯವಾಗುವ ಚಂದಮಾಮ ಕಥೆಗಳಂತೆ ಎಲ್ಲವೂ ಸುಖಮಯವಾಗುತ್ತದೆ ಎಂದು ಎಲ್ಲರೂ ಅಂದುಕೊಂಡರು.

    ಬರೀ ಅಂದುಕೊಂಡದ್ದೇ ಬಂತು. ದುರದೃಷ್ಟವನ್ನು ಹುಟ್ಟಿನೊಂದಿಗೇ ಬೆನ್ನಿಗೆ ಕಟ್ಟಿಕೊಂಡು ಬಂದಂತಿರುವ ಬಾಂಗ್ಲಾದೇಶದಲ್ಲಿ ಇದುವರೆಗೆ ನಾಲ್ಕು ಸಲ ಸೈನಿಕ ಕ್ರಾಂತಿಗಳಾಗಿವೆ, ಇಬ್ಬರು ರಾಷ್ಟ್ರಾಧ್ಯಕ್ಷರ ಹತ್ಯೆಯಾಗಿದೆ; ಹದಿನೈದು ಸರ್ಕಾರಗಳು ಬಂದುಹೋಗಿ, ಹದಿನಾರನೆಯದು ಸರ್ವಾಧಿಕಾರಿ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದೆ!

    ಭಯಾನಕ ವಿಪರ್ಯಾಸವೆಂದರೆ ಯಾವ ಪಾಕಿಸ್ತಾನದ ಪಾಶವೀಶಕ್ತಿಯ ವಿರುದ್ಧ ಹೋರಾಡಿ ದೇಶ ಸ್ವಾತಂತ್ರ್ಯ ಪಡೆದಿತ್ತೋ ಆ ಪಾಕಿಸ್ತಾನವನ್ನೇ ಓಲೈಸುವ ಕೆಲಸವನ್ನು ಕೆಲವು ರಾಜಕೀಯ ಪಕ್ಷಗಳಲ್ಲದೇ ಹಲವು ಸೇನಾಧಿಕಾರಿಗಳೂ ಮಾಡಹೊರಟ ದುರಂತ ಆರಂಭವಾಯಿತು. ದೇಶದ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ವಿರೋಧಿಸಿ, ಪಾಕಿಸ್ತಾನೀ ಕೊಲೆಗಡುಕರಿಗೆ ಎಲ್ಲ ರೀತಿಯ ಸಹಕಾರವನ್ನೂ ನೀಡಿದ್ದ ಅಮೆರಿಕ ಅನತಿಕಾಲದಲ್ಲೇ ಬಾಂಗ್ಲಾದೇಶೀಯರ ಪ್ರೀತಿ ಗಳಿಸಿಕೊಂಡಿತು. ಕಮ್ಯೂನಿಸ್ಟ್ ಪಕ್ಷ ಸಹ ಅಮೆರಿಕಾದ ಗುಪ್ತಚರ ಇಲಾಖೆಗಳಿಂದ ಹಣ ತೆಗೆದುಕೊಂಡು ಅದಕ್ಕನುಗುಣವಾಗಿ ತನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿತು! ಕಮ್ಯೂನಿಸ್ಟ್ ಪಕ್ಷವೊಂದು ಬಂಡವಾಳಶಾಹಿ ಅಮೆರಿಕಾದ ಎಂಜಲುನಾಯಿಯಾದ ಉದಾಹರಣೆ ಜಾಗತಿಕ ಇತಿಹಾಸದಲ್ಲಿ ಅಧಿಕೃತವಾಗಿ ಕಾಣಿಸಿಕೊಂಡ ಉದಾಹರಣೆ ಮತ್ತೊಂದಿಲ್ಲ.

    ಇದಕ್ಕೆ ವಿರುದ್ಧವಾಗಿ ಭಾರತದ ಬಗೆಗಿನ ಅವರ ಸಕಾರಾತ್ಮಕ ಭಾವನೆಗಳು ಅತಿಶೀಘ್ರದಲ್ಲಿ ನಶಿಸಿಹೋದವು. ಇದಕ್ಕೆ ಎರಡು ಕಾರಣಗಳಿವೆ. ಒಂದು- ಬಾಂಗ್ಲಾದೇಶೀಯರಲ್ಲಿ ಅರ್ಥಾತ್ ಪೂರ್ವ ಪಾಕಿಸ್ತಾನೀ ಮುಸ್ಲಿಮರಲ್ಲಿ ಭಾರತ ಮತ್ತು ಹಿಂದೂಗಳ ಬಗ್ಗೆ ಸ್ವಾತಂತ್ರ್ಯಪೂರ್ವದಲ್ಲಿ ಬೇರೂರಿದ್ದ ಅಸಹನೆ ಹಾಗೂ ದ್ವೇಷಭಾವನೆ. ಪಶ್ಚಿಮ ಪಾಕಿಸ್ತಾನೀಯರಿಂದ ತೊಂದರೆಗೊಳಗಾದಾಗ ಸ್ವಾನುಕೂಲಕ್ಕಾಗಿ ಭಾರತದ ಕಡೆಗೆ ತಿರುಗಿದ್ದ ಅವರು ತಮ್ಮ ಬದುಕಿನಿಂದ ಪಶ್ಚಿಮ ಪಾಕಿಸ್ತಾನ ದೂರವಾದೊಡನೇ ಭಾರತದ ಅಗತ್ಯವನ್ನೂ ಮರೆತುಬಿಟ್ಟರು. ಎರಡು- ದೊಡ್ಡದೇಶವೊಂದರ ಮಗ್ಗುಲಲ್ಲಿರುವ ಸಣ್ಣದೇಶಗಳಲ್ಲಿ ಒಂದು ಬಗೆಯ ಮನೋಭಾವ ಬೆಳೆಯುತ್ತದೆ. ಅದೆಂದರೆ ಅಲ್ಲಿನ ರಾಜಕಾರಣಿಗಳು ತಮ್ಮೆಲ್ಲಾ ವೈಫಲ್ಯಗಳನ್ನು ಜನರಿಂದ ಮರೆಮಾಚಲು ದೇಶದ ಸಂಕಟಗಳಿಗೆಲ್ಲಾ ನೆರೆಯ ದೊಡ್ಡದೇಶವೇ ಕಾರಣವೆಂದು ಬಿಂಬಿಸಿ ತಮ್ಮ ಅಧಿಕಾರ ಕಾಪಾಡಿಕೊಳ್ಳುವ ತಂತ್ರ ಹೂಡುವುದು. ಇದನ್ನು ‘ಸ್ಮಾಲ್ ಸ್ಟೇಟ್ ಮೆಂಟಾಲಿಟಿ’ ಎಂದು ಕರೆಯಲಾಗುತ್ತದೆ. ಭಾರತ-ಬಾಂಗ್ಲಾದೇಶ ವಿಷಯದಲ್ಲಿ ಆದದ್ದೂ ಹಾಗೆಯೇ. ಎಲ್ಲೆಮೀರಿ ಬೆಳೆಯುತ್ತಿದ್ದ ಜನಸಂಖ್ಯೆ, ಅದಕ್ಕನುಗುಣವಾಗಿ ವೃದ್ಧಿಯಾಗದ ಆರ್ಥಿಕತೆ, ತತ್ಪರಿಣಾಮವಾಗಿ ಏರತೊಡಗಿದ ಬಡತನ ಮತ್ತು ನಿರುದ್ಯೋಗ ನವರಾಷ್ಟ್ರದ ಜನತೆಯಲ್ಲಿ ಅಸಂತೋಷ ಭುಗಿಲೇಳಲು ಕಾರಣವಾಯಿತು. ಅದು ಹೊರಹೊಮ್ಮಿದಾಗೆಲ್ಲಾ ನೆರೆಯ ದೊಡ್ಡದೇಶದ ಗುಮ್ಮನನ್ನು ಅವರ ಮುಂದಿಟ್ಟು ತಾವು ಜಾರಿಕೊಳ್ಳುವ ನೇತಾರರ ತಂತ್ರವೂ ಆರಂಭವಾಯಿತು.

    ಪರಿಣಾಮವಾಗಿ ದುರಂತಗಳ ಸರಮಾಲೆಯೇ ಘಟಿಸಿಹೋಯಿತು. 1970ರ ಡಿಸೆಂಬರ್ ಚುನಾವಣೆಗಳಲ್ಲಿ ಜಯಶೀಲವಾದ ಅವಾಮಿ ಲೀಗ್​ಗೆ ಅಧಿಕಾರ ಮತ್ತು ಮುಜೀಬ್​ರಿಗೆ ಪ್ರಧಾನಮಂತ್ರಿಯ ಸ್ಥಾನ ದಕ್ಕದಂತೆ ಮಾಡಿದ್ದು ಜುಲ್ಪೀಕರ್ ಆಲಿ ಭುಟ್ಟೋ. ನಂತರ ಪೂರ್ವ ಪಾಕಿಸ್ತಾನದಲ್ಲಿ ಜನರಲ್ ಟಿಕ್ಕಾ ಖಾನ್ ಸತತ ಒಂಬತ್ತು ತಿಂಗಳುಗಳವರೆಗೆ ಮಾರಣಹೋಮ ಎಸಗಲೂ ಅದೇ ಭುಟ್ಟೋ ಪ್ರೇರಕ. ಅಂತಹ ಭುಟ್ಟೋ ಜೂನ್ 1974ರಲ್ಲಿ ಢಾಕಾಗೆ ಭೇಟಿ ನೀಡಿದಾಗ ಊಹೆಗೂ ನಿಲುಕದಂಥ ಘಟನೆಗಳು ಘಟಿಸಿಹೋದವು. ಭುಟ್ಟೋ ಇದ್ದ ವಾಹನ ವಿಮಾನನಿಲ್ದಾಣದಿಂದ ಹೊರಬಂದಾಗ ಜನಜಂಗುಳಿ ಅವರಿಗೆ ಜಯಕಾರ ಕೂಗಿತು, ಸ್ವಾತಂತ್ರ್ಯವೀರ ಮುಜೀಬುರ್ ರಹಮಾನ್​ರ ಕಾರಿಗೆ ಚಪ್ಪಲಿಹಾರ ಹಾಕಿತು, ಪಕ್ಕದಲ್ಲಿದ್ದ ಭಾರತೀಯ ರಾಯಭಾರಿ ಸುಬಿಮಲ್ ದತ್​ರ ಕಾರಿನ ಬಾನೆಟ್ ಮೇಲೆ ದಬದಬ ಗುದ್ದಿತು. ಹದಿನಾಲ್ಕು ತಿಂಗಳ ನಂತರ 1975ರ ಆಗಸ್ಟ್ 15ರಂದು ‘ಬಂಗಬಂಧು’ ಮುಜೀಬುರ್ ರಹಮಾನ್ ಮತ್ತವರ ಕುಟುಂಬದ ಹದಿನೇಳು ಸದಸ್ಯರ ಕಗ್ಗೊಲೆಯಾಯಿತು!

    ಈ ಕರಾಳ ಕೃತ್ಯ ಎಸಗಿದವರು ಬಾಂಗ್ಲಾದ ಸೇನಾಧಿಕಾರಿಗಳಾದರೂ ಇದರ ಹಿಂದೆ ಪಾಕಿಸ್ತಾನ ಮತ್ತು ಅಮೆರಿಕಾಗಳಿದ್ದವು. ದೇಶವನ್ನು ತುಂಡರಿಸಿದ, ಭಾರತದ ಮಿತ್ರನಾದ ಮುಜೀಬ್ ಬಗ್ಗೆ ಪಾಕಿಸ್ತಾನೀಯರಿಗೆ ರೋಷವಿದ್ದದ್ದು ಸಹಜ. ಹಾಗೆಯೇ ಮಾಸ್ಕೋ ಜತೆ ಉತ್ತಮ ಸಂಬಂಧಗಳನ್ನು ಹೊಂದಿದ್ದ ಮುಜೀಬ್​ರ ಅವಾಮೀ ಲೀಗ್ ಸರ್ಕಾರ ಬಾಂಗ್ಲಾ ನೆಲದಲ್ಲಿ ಸೋವಿಯೆತ್ ಸೇನಾನೆಲೆ ಸ್ಥಾಪನೆಗೆ ಅವಕಾಶ ಮಾಡಿಕೊಡಬಹುದೆಂಬ ಆತಂಕದಲ್ಲಿ ಅಮೆರಿಕಾ ಮತ್ತು ಚೀನಾದ ನಾಯಕರು ತೊಳಲುತ್ತಿದ್ದದ್ದೂ ನಿಜ. ಆದರೆ ಮುಜೀಬ್ ತಮ್ಮ ಜನರಿಗೇ ಬೇಡವಾದದ್ದು ಹೇಗೆ? ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಬಹುಶಃ ಎಂದೂ ಸಿಗುವುದೂ ಇಲ್ಲ.

    ಅದಾದ ಎರಡು ವರ್ಷಗಳಲ್ಲಿ ಮೂರು ಸರ್ಕಾರಗಳು ಬಂದುಹೋಗಿ, ಸೇನಾಧಿಕಾರಿ ಜಿಯಾ-ಉರ್-ರಹಮಾನ್ ಸೇನಾಕ್ರಾಂತಿಯ ಮೂಲಕ ಅಧಿಕಾರಕ್ಕೇರಿದರು. ಗಂಗಾನದಿ ನೀರುಹಂಚಿಕೆಯ ಕುರಿತಾಗಿ ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆಗೂ ಮುಂದಾಗದೇ, ಭಾರತ ಅನ್ಯಾಯವೆಸಗುತ್ತಿದೆಯೆಂದು ಕೂಗುತ್ತಾ ಜಿಯಾ ಮತ್ತವರ ಸಹಯೋಗಿಗಳು ಅಧಿಕಾರಕ್ಕೆ ಅಂಟಿಕೊಂಡು ನಾಲ್ಕು ವರ್ಷ ಮುಂದುವರಿದರು.

    ಮುಜೀಬ್ ಮತ್ತವರ ಇಡೀ ಕುಟುಂಬದ ಕೊಲೆಯಾದ ಸಮಯದಲ್ಲಿ ಅವರ ಮಗಳು ಹಸೀನಾ ವಾಜಿದ್ ದೆಹಲಿಯಲ್ಲಿದ್ದುದರಿಂದ ಬಚಾವಾದರು. ಮುಂದಿನ ಆರು ವರ್ಷಗಳವರೆಗೆ ಸ್ವದೇಶಕ್ಕೆ ಹಿಂತಿರುಗುವ ಧೈರ್ಯವನ್ನೇ ಹಸೀನಾ ಮಾಡಲಿಲ್ಲ. 1981ರಲ್ಲಿ ಕೊನೆಗೂ ಆಕೆ ತಾಯ್ನಾಡಿಗೆ ಹಿಂತಿರುಗುವ ನಿರ್ಧಾರ ಪ್ರಕಟಿಸಿದಾಗ ಜಿಯಾ ಸಾಹೇಬರು ಮತ್ತೊಂದು ವರಸೆ ಆರಂಭಿಸಿದರು. ಬಂಗಾಳ ಕೊಲ್ಲಿಯಲ್ಲಿ ದಶಕದ ಹಿಂದೆ ಸೃಷ್ಟಿಯಾಗಿದ್ದ, ಭೌಗೋಳಿಕವಾಗಿ ಮತ್ತು ಕಾನೂನಾತ್ಮಕವಾಗಿ ಭಾರತದ ಭಾಗವಾಗಿದ್ದ ಪುಟ್ಟ ನ್ಯೂ ಮೂರ್ ದ್ವೀಪದ ಮೇಲೆ ಹಕ್ಕು ಸಾಧಿಸಿ, ಅದನ್ನು ಭಾರತ ಆಕ್ರಮಿಸಿಕೊಂಡಿದೆಯೆಂದು ತನ್ನ ಜನರನ್ನು ನಂಬಿಸುವ ಸಾಹಸಕ್ಕೆ ಜಿಯಾ ಇಳಿದರು. ಬಾಂಗ್ಲಾದ ನೆಲವನ್ನು ಆಕ್ರಮಿಸಿಕೊಂಡಿರುವ ಭಾರತವು ಬಾಂಗ್ಲಾದ ವೈರಿ, ಭಾರತದ ಬಗ್ಗೆ ಸದ್ಭಾವನೆ ಹೊಂದಿರುವ ಹಸೀನಾ ಸಹ ಬಾಂಗ್ಲಾದ ವೈರಿ ಎಂದು ನಂಬಿಸುವ ಋಣಾತ್ಮಕ ನೌಟಂಕಿ ಜಿಯಾರದು. ಆ ಆಟದ ನಡುವೆಯೇ ಆ ಚಾಲಾಕಿ ಸೇನಾಧಿಕಾರಿ ಹತ್ಯೆಗೀಡಾದರು. ವರ್ಷದೊಳಗೆ ಮಹಮದ್ ಇರ್ಷಾದ್ ಸೇನಾಕ್ರಾಂತಿಯೆಸಗಿ ಅಧಿಕಾರ ಕಬಳಿಸಿದರು. ಆ ಮೂಲಕ ಜಿಯಾ ಹತ್ಯೆಯ ಹಿಂದಿದ್ದ ಸಂಚಿನ ಸುಳಿವನ್ನೂ ಜಗತ್ತಿಗೆ ನೀಡಿದರು. ಅವರ ಹಿಂದಿದ್ದದ್ದು ಅದೇ ಪಾಕಿಸ್ತಾನ, ಅಮೆರಿಕ. ಅವೆರಡರ ಜತೆ ಈಗ ಚೀನಾ ಸಹ ಸೇರಿಕೊಂಡಿತ್ತು. ಇರ್ಷಾದ್ ಮುಂದಿನ ಎಂಟು ವರ್ಷಗಳವರೆಗೆ ಪಟ್ಟಾಗಿ ಕೂತದ್ದೂ ಅವೇ ಮೂರು ದೇಶಗಳ ಬೆಂಬಲದಿಂದ. ಒಂದಾದ ಮೇಲೊಂದು ಬಿಕ್ಕಟ್ಟನ್ನು ಎದುರಿಸುತ್ತಿದ್ದ ಆಗ್ನೇಯ ಏಶಿಯಾಗೆ ಹತ್ತಿರಾಗಿದ್ದು ಆಯಕಟ್ಟಿನ ಸ್ಥಳದಲ್ಲಿದ್ದ ಬಾಂಗ್ಲಾದೇಶ ಸೋವಿಯೆತ್ ಯೂನಿಯನ್​ಗೆ ಮಣೆ ಹಾಕಬಾರದೆಂದು ಆ ಮೂರೂ ದೇಶಗಳ ಒಳಹುನ್ನಾರವಾಗಿತ್ತು. ಇಷ್ಟಾಗಿಯೂ ಗದ್ದಿಗೆಯಲ್ಲಿ ಮುಂದುವರಿಯಲು ಇರ್ಷಾದ್​ಗೆ ಸಿಕ್ಕಿದ ದೊಡ್ಡ ಊರುಗೋಲೂ ಭಾರತ-ದ್ವೇಷವೇ.

    ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಮಸ್ಯೆ ಭಾರತದಲ್ಲಿ ದೊಡ್ಡದಾಗಿ ಸುದ್ದಿಯಾದದ್ದು, ಅದನ್ನು ತಡೆಯಬೇಕೆಂದು, ಅಸ್ಸಾಮ್ ಆಂದೋಲನದ ಮೂಲಕ ಇಂದಿರಾ ಸರ್ಕಾರದ ಮೇಲೆ ಒತ್ತಡ ಬಿದ್ದದ್ದೂ ಆ ದಿನಗಳಲ್ಲಿ. ಶ್ರೀಮಂತ ಬಾಂಗ್ಲಾದೇಶದಿಂದ ಬಡಭಾರತಕ್ಕೆ ಯಾರೂ ವಲಸೆ ಹೋಗುತ್ತಿಲ್ಲ ಎಂದೂ, ವಲಸೆಯ ಸಮಸ್ಯೆ ಸಾರ್ವಭೌಮ ಬಾಂಗ್ಲಾದೇಶವನ್ನು ಅವಮಾನಿಸಲು ಭಾರತ ಹುಟ್ಟುಹಾಕಿರುವ ಕಟ್ಟುಕತೆಯೆಂದೂ ಹೇಳಿ ಭಾರತ-ದ್ವೇಷವನ್ನು ಮತ್ತಷ್ಟು ಉಗ್ರವಾಗಿಸಲು ಇರ್ಷಾದ್ ಪ್ರಯತ್ನಿಸಿದ್ದೀಗ ಇತಿಹಾಸ.

    ಆಗ್ನೇಯ ಬಾಂಗ್ಲಾದೇಶದ ಚಿಟ್ಟಗಾಂಗ್ ಗುಡ್ಡಗಾಡು ಪ್ರದೇಶ ಬೌದ್ಧ ಹಾಗೂ ಹಿಂದೂಗಳ ನೆಲೆ. ಅವರಲ್ಲಿ ಬಹುಸಂಖ್ಯಾತರು ಚಕ್ಮಾ ಜನಾಂಗಕ್ಕೆ ಸೇರಿದವರು. ದೇಶವಿಭಜನೆಯ ನಿಯಮಗಳ ಪ್ರಕಾರ ಆ ಪ್ರದೇಶ ಭಾರತಕ್ಕೆ ಸೇರಬೇಕಾಗಿತ್ತು. ಆದರೆ ಕಾಣದ ಕೈವಾಡದಿಂದ ಅದು ಪೂರ್ವ ಪಾಕಿಸ್ತಾನದ ಭಾಗವಾಗಿಹೋಯಿತು. ಹಿಂದೂ ಮತ್ತು ಬೌದ್ಧ ಚಕ್ಮಾ ಮೂಲನಿವಾಸಿಗಳನ್ನು ಓಡಿಸಿ ಅವರ ನೆಲವನ್ನು ಬಂಗಾಲಿ ಮುಸ್ಲಿಮರು ಕಬಳಿಸುವುದು ಬಾಂಗ್ಲಾದೇಶದ ಹುಟ್ಟಿನ ನಂತರ ಅಧಿಕವಾಯಿತು. ಪರಿಣಾಮವಾಗಿ 50,000ಕ್ಕೂ ಹೆಚ್ಚಿನ ಚಕ್ಮಾಗಳು ನಿರಾಶ್ರಿತರಾಗಿ ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳಿಗೆ ಓಡಿಬಂದರು. ಈ ಸಮಸ್ಯೆಯನ್ನೂ ಸರಿಪಡಿಸಲು ಇರ್ಷಾದ್ ಸರ್ಕಾರ ಮುಂದಾಗಲಿಲ್ಲವಷ್ಟೇ ಅಲ್ಲ, ಚಕ್ಮಾಗಳಿಗೆ ಯಾವುದೇ ತೊಂದರೆಯಾಗಿಲ್ಲವೆಂದೂ, ಹಿಂತಿರುಗಬಯಸುವ ಚಕ್ಮಾಗಳನ್ನು ಭಾರತವೇ ತಡೆಯುತ್ತಿದೆಯೆಂದೂ ಸುಳ್ಳಿನ ಪ್ರಚಾರಕ್ಕೆ ತೊಡಗಿತು. ಅದರ ಸುಳ್ಳಿನ ಬಲೂನಿಗೆ ಸೂಜಿ ಚುಚ್ಚಿದ ನಾರ್ವೆಜಿಯನ್ ಮಾನವತಾವಾದಿ ಸಂಘಟನೆ ತನ್ನ ತನಿಖಾವರದಿಗಳ ಮೂಲಕ ಹೇಳಿದ್ದೇನೆಂದರೆ, ಯಾವ ದೌರ್ಜನ್ಯಗಳಿಗಾಗಿ ಬಾಂಗ್ಲಾದೇಶೀಯರು ಪಾಕಿಸ್ತಾನೀ ಸೇನೆಯನ್ನು ದೂಷಿಸಿದರೋ ಅವೇ ದೌರ್ಜನ್ಯಗಳನ್ನು ಬಾಂಗ್ಲಾದೇಶೀ ಸೇನೆ ಮತ್ತು ನಾಗರಿಕರು ಚಕ್ಮಾಗಳ ಮೇಲೆ ಎಸಗುತ್ತಿದ್ದಾರೆ ಎಂದು!

    1991ರಲ್ಲಿ ಇರ್ಷಾದ್ ಕೊನೆಗೂ ಕೆಳಗಿಳಿದದ್ದು ಅಮೆರಿಕಾದ ಒತ್ತಡದಿಂದಲೇ. ಕಮ್ಯೂನಿಸಂ, ಜತೆಗೆ ಸೋವಿಯೆತ್ ಯೂನಿಯನ್ ಕುಸಿದು, ಶೀತಲ ಸಮರವನ್ನು ‘ಗೆದ್ದ’ ಅಮೆರಿಕಾ ಮತ್ತದರ ಮಿತ್ರದೇಶಗಳು ಎಲ್ಲೆಡೆ ಪ್ರಜಾಪ್ರಭುತ್ವವನ್ನು ಚಿಗುರಿಸಿ ತನ್ಮೂಲಕ ನಮ್ಮೀ ಭೂಮಂಡಲವನ್ನು ‘ಆಚಡಛಿ ಘಛಿಡಿ ಗಟ್ಟ್ಝ‘ ಮಾಡಹೊರಟಾಗ ಅವುಗಳಿಗೆ, ಜನವಿರೋಧಕ್ಕೆ ಸೊಪ್ಪುಹಾಕದೇ ಅಲ್ಲಲ್ಲಿ ಬೇರುಬಿಟ್ಟು ಕೂತಿದ್ದ ಮರಿಸರ್ವಾಧಿಕಾರಿಗಳಿಂದ ಪ್ರಯೋಜನವೇನೂ ಕಾಣಲಿಲ್ಲ. ಹೀಗೆ ಉಪಯುಕ್ತತೆ ಕಳೆದುಕೊಂಡವರಲ್ಲಿ ಇರ್ಷಾದ್ ಸಹ ಒಬ್ಬರು. ಅವರ ವಿರುದ್ಧ ಭುಗಿಲೆದ್ದ ಜನವಿರೋಧಕ್ಕೆ ಅಮೆರಿಕ ಬೆಂಬಲವಾಗಿ ನಿಂತ ಪರಿಣಾಮವಾಗಿ ಆತ ಕೆಳಗಿಳಿದ ಮೇಲೆ ಬಾಂಗ್ಲಾದೇಶದಲ್ಲಿ ಕಾಲಕಾಲಕ್ಕೆ ಮಳೆಬೆಳೆಯ ಜೊತೆ ಚುನಾವಣೆಗಳೂ ನಡೆಯುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗತೊಡಗಿತ್ತು. ಅಥವಾ ಅಂಥ ಭ್ರಮೆ ಉಂಟಾಗಿತ್ತು.

    1991ರ ಚುನಾವಣೆಗಳಲ್ಲಿ ವಿಜಯಿಯಾದದ್ದು ಮಾಜಿ ಸೇನಾ ಸರ್ವಾಧಿಕಾರಿ ಜಿಯಾ-ಉರ್-ರಹಮಾನ್ ಸ್ಥಾಪಿಸಿದ್ದ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್​ಪಿ). ಅದರ ನಾಯಕಿ ಬೇಗಂ ಖಲೀದಾ ಜಿಯಾ ಹೇಳಿಕೇಳಿ ಜಿಯಾರದೇ ಪತ್ನಿ. ಹೀಗಾಗಿ ಆಕೆಯ ಅಧಿಕಾರಾವಧಿಯಲ್ಲೂ ಭಾರತ-ಬಾಂಗ್ಲಾದೇಶ ಸಂಬಂಧಗಳು ಉತ್ತಮಗೊಳ್ಳಲಿಲ್ಲ. ಜತೆಗೆ, ಬೇಗಂ ಖಲೀದಾ ಹಾಗೂ ಆಕೆಯ ಬಿಎನ್​ಪಿ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರಾದದ್ದು ಮತ್ತೊಂದು ದುರಂತ. ಜತೆಗೇ, 2001-06ರ ನಡುವಿನ ಆಕೆಯ ಎರಡನೆಯ ಅಧಿಕಾರಾವಧಿಯಲ್ಲಿ ಬಿಎನ್​ಪಿಯ ಹಲವಾರು ನೇತಾರರು ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕರಿಗೆ ಒಳಗೊಳಗೇ ಕುಮ್ಮಕ್ಕು ಕೊಟ್ಟು ರಾಷ್ಟ್ರದ ಪ್ರಜಾಪ್ರಭುತ್ವದ ಬುಡಕ್ಕೇ ಕೊಡಲಿ ಹಾಕುವ ಘಾತುಕ ಕೃತ್ಯವೆಸಗಿದರು. ವಿಶ್ವ ವ್ಯಾಪಾರ ಕೇಂದ್ರ ಹಾಗೂ ಪೆಂಟಗನ್ ಮೇಲಿನ ಅಲ್-ಖಯೀದಾ ದಾಳಿಗೆ ಪ್ರತೀಕಾರವಾಗಿ ಅಮೆರಿಕಾ ಭಯೋತ್ಪಾದನೆಯ ವಿರುದ್ಧ ಸಾರಿದ ಸಮರದಲ್ಲಿ ಪಾಕಿಸ್ತಾನವನ್ನು ಬಲವಂತವಾಗಿ ಸೇರಿಸಿಕೊಂಡಾಗ ಅಲ್ಲಿ ನೆಲೆ ಕಳೆದುಕೊಂಡ ಭಯೋತ್ಪಾದಕರು ಆಶ್ರಯ ಪಡೆದದ್ದು ಬಾಂಗ್ಲಾದೇಶದಲ್ಲಿ. ತದನಂತರ ಬಾಂಗ್ಲಾದೇಶ ವಿಶ್ವದ ಇಸ್ಲಾಮಿಕ್ ಮೂಲಭೂತವಾದೀ ಭಯೋತ್ಪಾದಕರ ಕಾರ್ಖಾನೆಯಾಗಿ ಬದಲಾಗಲು ಹೆಚ್ಚುಕಾಲ ಬೇಕಾಗಲಿಲ್ಲ. ಇದೆಲ್ಲಾ ನಡೆದದ್ದು ಬೇಗಂ ಖಲೀದಾರ ಮೂಗಿನ ಕೆಳಗೇ. ಮೂಲಭೂತವಾದದ ಮುಂಚೂಣಿಯಲ್ಲಿರುವ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಹಾಗೂ ಅದರ ಅಂಗಸಂಸ್ಥೆಯಾದ ಜಾಗ್ರತಾ ಮುಸ್ಲಿಮ್ ಜನತಾ ಬಾಂಗ್ಲಾದೇಶ್​ಗಳು ಬಾಂಗ್ಲಾದೇಶವನ್ನು ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಯಿಸುವ, ಎಲ್ಲ ರಂಗಗಳಲ್ಲೂ ಶರಿಯಾ ಕಾನೂನನ್ನು ಜಾರಿಗೆ ತರುವ ಪಣ ತೊಟ್ಟು ಅದಕ್ಕಾಗಿ ಹಿಂಸಾಮಾರ್ಗ ಹಿಡಿದಿವೆ. 2005ರ ಆಗಸ್ಟ್ 17ರಂದು ಒಂದೇ ದಿನದಲ್ಲಿ ದೇಶದ ಒಟ್ಟು 64 ಜಿಲ್ಲೆಗಳಲ್ಲಿ 63ರಲ್ಲಿ ಐನೂರಕ್ಕೂ ಹೆಚ್ಚು ಬಾಂಬ್ ಸ್ಪೋಟಗಳಾದವು.

    2006-08ರಲ್ಲಿ ಅಧಿಕಾರ ಸಂಭಾಳಿಸಿದ ಫಕ್ರುದ್ದೀನ್ ಅಹಮದ್ ನೇತೃತ್ವದ ಉಸ್ತುವಾರಿ ಸರ್ಕಾರ ಮೂಲಭೂತವಾದಿಗಳನ್ನು ಹತ್ತಿಕ್ಕಲು ಸೇನೆಯ ಬೆಂಬಲದಿಂದಲೇ ಕಠಿಣ ಕ್ರಮ ಆರಂಭಿಸಿತು. ದೋಷಿಗಳೆಂದು ತೀರ್ವನಿಸಲ್ಪಟ್ಟ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಸಂಸ್ಥೆಯ ನಾಯಕ ಅಬ್ದುರ್ ರಹಮಾನ್ ಮತ್ತವನ ಸಹಚರ ಬಂಗ್ಲಾ ಭಾಯ್ರನ್ನೊಳಗೊಂಡಂತೆ ಆರುಜನ ಭಯೋತ್ಪಾದಕರನ್ನು ಗಲ್ಲಿಗೇರಿಸಿತು. ಇಂಥದೇ ಕಠಿಣ ಕ್ರಮಗಳನ್ನು 2009ರಿಂದ ಅಧಿಕಾರದಲ್ಲಿರುವ ಶೇಖ್ ಹಸೀನಾ ವಾಜಿದ್ ಸರ್ಕಾರ ಮುಂದುವರಿಸಿದ್ದರೂ ಉಗ್ರವಾದವೇನೂ ನಿಂತಿಲ್ಲ. ಜುಲೈ 1, 2016ರಂದು ಅದು ರಾಜಧಾನಿಯಲ್ಲೇ ಇಪ್ಪತ್ತು ಜನರನ್ನು ಬಲಿತೆಗೆದುಕೊಂಡಿತು. ಇದಕ್ಕಿಂತಲೂ ದೊಡ್ಡ ದುರಂತವೆಂದರೆ ತನ್ನ ವಿರೋಧಿಗಳನ್ನೆಲ್ಲಾ ಸಾರಾಸಗಟಾಗಿ ಮೂಲಭೂತವಾದಿಗಳೆಂದು ಕರೆದು ಜೈಲಿಗಟ್ಟುವ, ಆ ಮೂಲಕ ಏಕಪಕ್ಷದ ಸರ್ವಾಧಿಕಾರದತ್ತ ಹಸೀನಾರ ಅವಾಮಿ ಲೀಗ್ ಸರ್ಕಾರ ಎಗ್ಗಿಲ್ಲದೇ ಸಾಗಿರುವುದು.

    ಭಾರತ-ಬಾಂಗ್ಲಾದೇಶ ಸಂಬಂಧಗಳ ಬಗ್ಗೆ ಹೇಳುವುದಾದರೆ ಹಸೀನಾ ಸರ್ಕಾರ ಸಕಾರಾತ್ಮಕವಾಗಿಯೇ ಹೆಜ್ಜೆಯಿಡುತ್ತಿದೆ. 1996ರಲ್ಲಿ ತಮ್ಮ ಮೊದಲ ಅವಧಿಯಲ್ಲೇ ಗಂಗಾನದಿ ನೀರು ಹಂಚಿಕೆಯ ಸಮಸ್ಯೆ ಬಗೆಹರಿಸಿಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ಸರಿದಾರಿಗೊಯ್ದ ಹಸೀನಾ ಕಳೆದ ಹತ್ತು ವರ್ಷಗಳಲ್ಲಿ ಚೀನೀ ಸಾಲಸಂಕೋಲೆಯಿಂದ ಯಶಸ್ವಿಯಾಗಿ ನುಣುಚಿಕೊಂಡು ಭಾರತದ ಜತೆಗಿನ ಸಂಬಂಧಗಳನ್ನು ಆರೋಗ್ಯಕರ ಸ್ಥಿತಿಯಲ್ಲಿಡಲು ಶ್ರಮಿಸಿದ್ದಾರೆ. ಇದೇ 17ರಂದು ವರ್ಚುವಲ್ ಶೃಂಗದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಶೇಖ್ ಹಸೀನಾ ಇಬ್ಬರೂ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಸದೃಢಗೊಳಿಸುವ ಜಂಟಿ ನಿರ್ಧಾರವನ್ನು ಘೊಷಿಸಿದ್ದಾರೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts