ಎಫ್‌ಐಆರ್ ಬದಲು ಯುಡಿಆರ್ ಮಾಡಿದ್ದು ತಪ್ಪು!

It was wrong to do UDR instead of FIR!
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಇಂಡಿಯ ಆರ್.ಎಂ. ಶಹಾ ಶಾಲೆಯಲ್ಲಿ ಮೃತಪಟ್ಟ ಬಾಲಕ ಶಿವರಾಜ ರೋಡಗಿ ಅವರ ಮನೆಗೆ ಭೇಟಿ ನೀಡಿ ಬಾಲಕನ ತಾಯಿಗೆ ಸಾಂತ್ವನ ಹೇಳಿದರು.
Published on

ಇಂಡಿ: ಪಟ್ಟಣದ ಆರ್.ಎಂ. ಶಹಾ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಬಿದ್ದು ಬಾಲಕ ಶಿವರಾಜ ರೋಡಗಿ ಸಾವಿಗೀಡಾದ ಘಟನೆ ಕುರಿತು ಅಸಹಜ ಸಾವು (ಅನ್ ನ್ಯಾಚುರಲ್ ಡೆತ್) ಎಂದು ದೂರು ದಾಖಲು ಮಾಡಿದ್ದು ತಪ್ಪು, ಎಫ್‌ಐಆರ್ ದಾಖಲಿಸಬೇಕಿತ್ತು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಆರ್.ಎಂ. ಶಹಾ ಶಾಲೆಯಲ್ಲಿ ಮೃತಪಟ್ಟ ಬಾಲಕ ಶಿವರಾಜ ರೋಡಗಿ ಮನೆಗೆ ಬುಧವಾರ ಭೇಟಿ ನೀಡಿ ಬಾಲಕನ ತಾಯಿಗೆ ಸಾಂತ್ವನ ಹೇಳಿ, ನಂತರ ಶಾಲೆಗೆ ಭೇಟಿ ನೀಡಿ, ತದನಂತರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನೀರಿನ ಟ್ಯಾಂಕ್ ನೆಲ ಮಹಡಿಯಲ್ಲಿದೆ. ಅಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆಯಿಲ್ಲ. ನೀರಿನ ಟ್ಯಾಂಕ್‌ನ ಸ್ಟಾೃಂಡ್ ಸಂಪೂರ್ಣ ತುಕ್ಕು ಹಿಡಿದಿದೆ. ಅದನ್ನು ಶಾಲೆಯವರು ತಪಾಸಣೆ ಮಾಡಬೇಕಿತ್ತು. ರಾಜ್ಯ ಸರ್ಕಾರ 2016ರ ಮಕ್ಕಳ ಶಿಕ್ಷಣ ನೀತಿ ಕಾಯ್ದೆ ಅನ್ವಯ ಅನುದಾನ ಸಹಿತ ಮತ್ತು ರಹಿತ ಶಾಲೆಗಳು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪೂರ್ವಭಾವಿಯಾಗಿ ಸಿಸಿ ಕ್ಯಾಮರಾ ಅಳವಡಿಸಿ ಅಹಿತಕರ ನಡೆಯುವ ಘಟನೆಗಳ ಪಾಲನೆ ಮಾಡಿಲ್ಲ. ಸಿಸಿ ಕ್ಯಾಮರಾ ಅಳವಡಿಸಿದ್ದರೆ ಅದನ್ನು ಅವಲೋಕಿಸಿ, ಘಟನೆಯಲ್ಲಿ ಶಿಕ್ಷಣ ಸಂಸ್ಥೆ ತಪ್ಪಿಲ್ಲ ಎಂದು ಸಾಬೀತುಪಡಿಸುವ ಬದಲು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿರುವುದು ತಪ್ಪು ಎಂದು ಕೋಸಂಬೆ ಪ್ರತಿಪಾದಿಸಿದರು.

ಸಂಸ್ಥೆಯ ನಿರ್ಲಕ್ಷೃ ಮೇಲುನೋಟಕ್ಕೆ ಕಂಡು ಬರುತ್ತಿದ್ದು, ಇನ್ನು ಮುಂದೆ ಶಿಕ್ಷಣ ಸಂಸ್ಥೆಗಳು 2016ರ ಮಕ್ಕಳ ಶಿಕ್ಷಣ ನೀತಿಯನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಲು ಡಿಡಿಪಿಐ ಇವರಿಗೆ ತಿಳಿಸಿ, ನಿಯಮ ಪಾಲಿಸದ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಹೇಳಿದರು.
ಜಿಲ್ಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಂಘದಿಂದ ತುರ್ತಾಗಿ 1.25 ರೂ. ಪರಿಹಾರ ಧನ ನೀಡಲು ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು. ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರನ್ನು ಮಾಧ್ಯಮದ ಮೂಲಕ ಮನವಿ ಮಾಡಿದರು.

ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ. ಚೌಹಾಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜ ಜಿಗಳೂರ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಚ್. ನಾಗೂರ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಅಲಗೂರ, ಸಿಡಿಪಿಒ ಗೀತಾ ಗುತ್ತರಗಿಮಠ, ಸಿಪಿಐ ರತನಕುಮಾರ ಜೀರಗಿಹಾಳ, ಮೌನೇಶ ಪೋತದಾರ, ಗುರುರಾಜ ಇಟಗಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net