

ನವದೆಹಲಿ: ಇತ್ತಿಚೆಗೆ ನಿಷೇಧಿಸಲ್ಪಟ್ಟಿರುವ ಟಿಕ್ಟಾಕ್ ಸೇರಿ 59 ಆ್ಯಪ್ ಕಂಪನಿಗಳಿಗೆ ಭಾರತ 77 ಪ್ರಶ್ನೆಗಳ ಪ್ರಶ್ನೆಮಾಲಿಕೆಯನ್ನು ರವಾನಿಸಿದ್ದು, ಮೂರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಆ್ಯಪ್ಗಳಲ್ಲಿನ ಮಾಹಿತಿಯನ್ನು ಸೆನ್ಸಾರ್ ಮಾಡಲಾಗಿತ್ತೇ, ಯಾವುದಾದರೂ ವಿದೇಶಿ ಸರ್ಕಾರದ ಪರವಾಗಿ ಕೆಲಸ ಮಾಡಿದ್ದೀರಾ ಅಥವಾ ಪ್ರಭಾವಿಗಳ ಪರವಾಗಿ ಲಾಬಿ ಮಾಡಿದಿರಾ ಎಂಬ ಪ್ರಶ್ನೆಗಳು ಈ ಪ್ರಶ್ನೆಮಾಲಿಕೆಯಲ್ಲಿ ಸೇರಿವೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯ ರವಾನಿಸಿರುವ ಈ ಪ್ರಶ್ನೆಮಾಲಿಕೆಯ ಪ್ರಕಾರ, ನೀಡುವ ಸ್ಪಷ್ಟನೆ ತೃಪ್ತಿಕರವಾಗಿಲ್ಲದಿದ್ದರೆ, ಅಂಥ ಆ್ಯಪ್ಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಲಡಾಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಜೂ.15ರಂದು ನಡೆದಿದ್ದ ರಕ್ತಸಿಕ್ತ ಘರ್ಷಣೆಯ ನಂತರದಲ್ಲಿ ಕೇಂದ್ರ ಸರ್ಕಾರ ಟಿಕ್ಟಾಕ್ ಸೇರಿ ಚೀನಾ ಮೂಲದ 59 ಆ್ಯಪ್ಗಳನ್ನು ದೇಶದಲ್ಲಿ ನಿಷೇಧಿಸಿದೆ. ಈ ಆ್ಯಪ್ಗಳು ಭಾರತದ ಸಾರ್ವಭೌಮತ್ವ ಮತ್ತು ಏಕತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವನ್ನು ನಿಷೇಧಿಸಿರುವುದಾಗಿ ಹೇಳಿದೆ. ಆದರೆ, ಚೀನಾ ಸರ್ಕಾರ ಭಾರತದ ಈ ಕ್ರಮವನ್ನು ಟೀಕಿಸಿದೆ.
2019ರ ಫೆಬ್ರವರಿ 14ರಂದು ನಡೆದ ಉಗ್ರರ ಫುಲ್ವಾಮಾ ದಾಳಿಯಲ್ಲಿ ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಕುರಿತ ಮಾಹಿತ ಹಾಗೂ ದಾಳಿಯ ನಂತರದಲ್ಲಿನ ಮಾಹಿತಿಗಳನ್ನು ಆ್ಯಪ್ನಲ್ಲಿ ಸೆನ್ಸಾರ್ ಮಾಡಲಾಗಿತ್ತೇ ಎಂಬ ಪ್ರಶ್ನೆ ಕೂಡ ಇದರಲ್ಲಿ ಸೇರಿದೆ ಎನ್ನಲಾಗಿದೆ.
ಭಾರತದ ಪ್ರಶ್ನೆಮಾಲಿಕೆ ತನ್ನ ಕೈಸೇರಿದ್ದು, ಅದಕ್ಕೆ ಸೂಕ್ತ ಉತ್ತರಗಳನ್ನು ಸಿದ್ಧಪಡಿಸುತ್ತಿರುವುದಾಗಿ ಟಿಕ್ಟಾಕ್ ಹೇಳಿಕೊಂಡಿದೆ. ಬಳಕೆದಾರರ ವೈಯಕ್ತಿಕ ಮಾಹಿತಿ ವಿಷಯದಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ಸೇರಿ ಭಾರತದ ಕಾನೂನನ್ನು ತಾನು ಗೌರಿವಿಸುತ್ತಿದುದಾಗಿ ಅದು ಹೇಳಿಕೊಂಡಿದೆ. ಆದರೆ ಆಲಿಬಾಬಾ ಸಂಸ್ಥೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.