

ಕಾರ್ಕಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಸಂಸ್ಕಾರ, ಶಿಸ್ತು ಹಾಗೂ ವಾನವೀಯತೆ ಬೆಳೆಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದು ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಹೇಳಿದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ‘ಕ್ರಿಯೇಟಿವ್ ಗುರುದೇವೋಭವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರುವಂದನೆ ಸ್ವೀಕರಿಸಿದ ಪಲಾಯಿ ಬಾಕ್ಯಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಯೋಗೀಶ್ ಕಿಣಿ ಮಾತನಾಡಿ ಇಂದಿನ ಪೀಳಿಗೆಗೆ ಶಿಕ್ಷಕರು ಕೇವಲ ಪಾಠ ಬೋಧಿಸುವು ಮಾತ್ರವಲ್ಲ, ಬಾಳಿನ ದಾರಿ ತೋರಿಸುವ ದೀಪಸ್ತಂಭರೂ ಆಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನನ್ಯ ಎಂದರು.
ಅಮ್ಮನ ನೆರವು ಚಾರಿಟೆಬಲ್ ಟ್ರಸ್ಟ್ ಕಾರ್ಕಳ ಅಧ್ಯಕ್ಷ ಅವಿನಾಶ್ ಜಿ.ಶೆಟ್ಟಿ ಮಾತನಾಡಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಹೆಗಡೆ, ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಲೋಹಿತ್ ಎಸ್.ಕೆ., ರಸಾಯನಶಾಸ್ತ್ರ ಉಪನ್ಯಾಸಕ ಮಲ್ಲಿಕಾರ್ಜುನ ಜಿ.ರಾವ್, ಕನ್ನಡ ವಿಭಾಗ ಮುಖ್ಯಸ್ಥ ಶಿವಕುವಾರ್ ಅವರನ್ನು ಗೌರವಿಸಲಾಯಿತು.
ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಹಿಂದಿ ಭಾಷಾ ಉಪನ್ಯಾಸಕಿ ವೃಂದಾದಾತೆ ಪರಿಚಯಿಸಿದರು. ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕಾ ತೀರ್ಥರಾಮ ನಿರೂಪಿಸಿ, ವಂದಿಸಿದರು.