

ಮಂಗಳೂರು: ಭಾರತದ ಪಾರಂಪರಿಕ ವೈದ್ಯ ಪದ್ಧತಿಯಾಗಿರುವ ಆಯುರ್ವೇದವನ್ನು ನಾವು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದೇವೆ. ಈ ಪದ್ಧತಿಯನ್ನು ಉಳಿಸಿ ಇನ್ನಷ್ಟು ವ್ಯಾಪಕವಾಗಿಸುವ ಜವಾಬ್ದಾರಿ ಆಯುರ್ವೇದ ವೈದ್ಯರ ಮೇಲಿದೆ ಎಂದು ಮಂಗಳೂರು ದಕ್ಷಿಣ ವಲಯ ಸಹಾಯಕ ಪೊಲೀಸ್ ಆಯುಕ್ತೆ ವಿಜಯ ಕ್ರಾಂತಿ ಹೇಳಿದರು.
ನಗರದ ಪುರಭವನದಲ್ಲಿ ಶನಿವಾರ ಕರ್ನಾಟಕ ಎಜ್ಯುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ನ ಅಂಗಸಂಸ್ಥೆ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ 16ನೇ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ಆಯುರ್ವೇದ ವೈದ್ಯ ಪದವೀಧರರಿಗೆ ಪದವಿ ಪ್ರದಾನಗೈದು ಅವರು ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನ ದುರುಪಯೋಗವಾಗುತ್ತಿದ್ದು, ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್, ಸೈಬರ್ ವಂಚನೆ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಇಂತಹ ವಂಚನಾ ಜಾಲಕ್ಕೆ ಬಲಿಯಾಗದೆ ಎಚ್ಚರ ವಹಿಸುವ ಅಗತ್ಯವಿದೆ. ಪೊಲೀಸ್ ಇಲಾಖೆಯೂ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದರು.
ದ.ಕ. ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಮುಖ್ಯ ಅತಿಥಿಯಾಗಿದ್ದರು. ತೆರೆಗೆ ಸರಿದಿದ್ದ ಆಯುರ್ವೇದ ವೈದ್ಯ ಪದ್ಧತಿ ಮತ್ತೆ ವಿಶ್ವದಾದ್ಯಂತ ಪ್ರಚಲಿತಕ್ಕೆ ಬರುತ್ತಿದೆ. ಶೇ.70ರಷ್ಟು ರೋಗಗಳನ್ನುಗುಣಪಡಿಸುವ ಶಕ್ತಿ ಆಯುರ್ವೇದ ಪದ್ಧತಿಗೆ ಇದೆ. ರೋಗಿಗಳಲ್ಲಿ ವಿಶ್ವಾಸ ಮೂಡಿಸುವುದರೊಂದಿಗೆ ಈ ಪದ್ಧತಿಯನ್ನು ಉಳಿಸುವುದು ಪ್ರತಿಯೊಬ್ಬ ಆಯುರ್ವೇದ ವೈದ್ಯರ ಜವಾಬ್ದಾರಿ ಎಂದರು.
ಕರ್ನಾಟಕ ಎಜ್ಯುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಜನೀಶ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಆಯುರ್ವೇದ ಪದವಿ ಪಡೆದ ವೈದ್ಯರು ಮಾನವೀಯ ಮೌಲ್ಯದೊಂದಿಗೆ ಚಿಕಿತ್ಸೆ ನೀಡಿ, ರೋಗಿಗಳ ವಿಶ್ವಾಸ ಗಳಿಸಬೇಕು. ಪ್ರಾಚೀನ ವೈದ್ಯ ಪದ್ಧತಿಯನ್ನು ರಕ್ಷಿಸುವ ಕೆಲಸ ಆಗಬೇಕು ಎಂದರು.
ಎಸ್ ಸಿಎಸ್ ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ಯು.ಕೆ. ಖಾಲಿದ್, ವೈದ್ಯಕೀಯ ಅಧೀಕ್ಷಕ ಡಾ.ಉದಯ್ ಡಿ.ಕೆ., ಪ್ರಾಂಶುಪಾಲ ಡಾ. ಸಜಿತ್ ಎಂ. ಉಪಸ್ಥಿತಿದ್ದರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ಡಾ. ಸುಚಿತ್ರಾ ಪ್ರತಿಜ್ಞಾವಿಧಿ ಬೋಧಿಸಿದರು. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ದ್ರವ್ಯಗುಣ ವಿಭಾಗ ಮುಖ್ಯಸ್ಥೆ, ನಿಕಟಪೂರ್ವ ಪ್ರಾಂಶುಪಾಲೆ ಡಾ.ಸ್ವಪ್ನಾ ವಾರ್ಷಿಕ ವರದಿ ಮಂಡಿಸಿದರು. ಉಪ ಪ್ರಾಂಶುಪಾಲ ಡಾ.ಅಜಿತ್ ಕಾಮತ್ ಸ್ವಾಗತಿಸಿ, ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥೆ ಡಾ.ವಹಿದಾ ಬಾನು ವಂದಿಸಿದರು. ಡಾ.ಜಿ. ಶ್ವೇತಾ ಪ್ರಭು ಮತ್ತು ಡಾ.ಕೃತಿ ಕಾರ್ಯಕ್ರಮ ನಿರೂಪಿಸಿದರು.