

ಮಂಗಳೂರು: ಸಾಹಿತ್ಯದ ಪ್ರತೀ ಸಾಲಿನಲ್ಲಿ ಭಿನ್ನ ಅರ್ಥ ಹಾಗೂ ಸಂದೇಶ ನೀಡುವ ನಿಟ್ಟಿನಲ್ಲಿ ಸಾಹಿತಿಗಳು ಗಮನ ನೀಡಬೇಕಾಗಿರುವುದು ಅವಶ್ಯ ಎಂದು ಸಾಹಿತಿ ಶಾಂತಾರಾಮ ಶೆಟ್ಟಿ ಹೇಳಿದರು.
ಕಲ್ಲಚ್ಚು ಪ್ರಕಾಶನ ಹಾಗೂ ಡಯಟ್ ಮಂಗಳೂರು ಆಶ್ರಯದಲ್ಲಿ ಮಂಗಳವಾರ ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯಲ್ಲಿ ಮನೋಜ್ ಕುಮಾರ್ ಶಿಬಾರ್ಲ ಅವರ ‘ಕಾಲು ಸಾವಿರ’ ಚುಟುಕುಗಳ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಬರೆಯುವ ಮೊದಲು ಓದುವ ಹವ್ಯಾಸ ಹೊಂದಿರಬೇಕು. ಹತ್ತು ಕೃತಿಗಳನ್ನು ಓದಿ ಅರ್ಥೈಸಿದ ಬಳಿಕ ಒಂದು ಕೃತಿ ಬರೆಯುವ ಪ್ರಯತ್ನ ಮಾಡಬೇಕು. ಸಾಹಿತಿಗೆ ಬರೆಯುವ ಕಲೆ ಮುಖ್ಯವಾಗಿದೆ. ಓದುಗನನ್ನು ಮನದಟ್ಟು ಮಾಡುವಂತೆ ಬರೆಯುವುದೇ ಸಾಹಿತ್ಯ. ಸಾಹಿತಿಯಾದವರು ಪದಗಳ ಬಳಕೆಯ ಬಗ್ಗೆ ಎಚ್ಚರ ವಹಿಸಬೇಕು. ತಪ್ಪುಗಳು ನಡೆದಲ್ಲಿ ಸಾಹಿತ್ಯವೇ ಅನರ್ಥವಾಗುತ್ತದೆ. ಬರೆಯುವ ಸಾಹಿತ್ಯದಲ್ಲಿ ಸಾಲುಗಳಿಗಿಂತ ಸೋಲ್(ಆತ್ಮ) ಮುಖ್ಯವಾಗಿದೆ ಎಂದರು.
ಮನೋಜ್ ಕುಮಾರ್ ಶಿಬಾರ್ಲ ಅವರು ಪ್ರಾಸ್ತಾವಿಸಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮಿ ಕೆ. ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ವ. ಉಮೇಶ ಕಾರಂತ ಕೃತಿ ಪರಿಚಯ ಮಾಡಿದರು. ಸಾಹಿತಿ ನಳಿನಾಕ್ಷಿ ಉದಯರಾಜ್, ದ.ಕ.ಚು.ಸಾ.ಪ. ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಹಿರಿಯ ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ಇದ್ದರು.
ಸಾಹಿತಿ, ಪ್ರಕಾಶಕ ಮಹೇಶ್ ಆರ್. ನಾಯಕ್ ಸ್ವಾಗತಿಸಿದರು. ಸಾಹಿತಿ ವಿಜಯಲಕ್ಷ್ಮಿ ಕಟೀಲ್ ವಂದಿಸಿದರು. ಎನ್. ಸುಬ್ರಾಯ ಭಟ್ ಗೋಷ್ಟಿ ನಿರ್ವಹಿಸಿದರು.