

ಕುಂದಾಪುರ: ಶ್ರೀ ಲಕ್ಷ್ಮೀ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾಸಂಘ ಶ್ರೀ ಕ್ಷೇತ್ರ ಶಂಕರಪ್ಪನ ಕೊಡ್ಲು, ಕೆಂಚನೂರು ಇದರ ದಶಮಾನೋತ್ಸವದ ಅಂಗವಾಗಿ ಹೆಜ್ಜೆ ಗೆಜ್ಜೆ ಶೀರ್ಷಿಕೆ ಅಡಿಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ವಿಕಲಚೇತನ ಶಾಲೆಗಳಲ್ಲಿ ಹಮ್ಮಿಕೊಂಡಿರುವ ವಿನೂತನವಾಗಿ ದಶ ಕಾರ್ಯಕ್ರಮಕ್ಕೆ ಜ್ಯೋತಿಷಿ ಶಾರ್ಕೆ ರಾಮಕೃಷ್ಣ ಭಟ್ ಕೆಂಚನೂರಿನ ಶ್ರೀ ಕ್ಷೇತ್ರ ಶಂಕರಪ್ಪನ ಕೊಡ್ಲಿನಲ್ಲಿ ಶನಿವಾರ ಚಾಲನೆ ನೀಡಿದರು.
ದೇವರ ಪ್ರೀತ್ಯರ್ಥವಾದಂತಹ ಯಕ್ಷಗಾನ ನಿಂತ ನೀರಾಗಬಾರದು. ಅದು ಸದಾ ಹರಿಯುತ್ತಾ ಎಲ್ಲರಿಗೂ ಸಂತೋಷವನ್ನು ನೀಡುತ್ತಾ ಮತ್ತಷ್ಟು ಬೆಳೆಯಬೇಕು, ಬೆಳಗಬೇಕು. ಆ ನಿಟ್ಟಿನಲ್ಲಿ ಈ ಯಕ್ಷಗಾನ ಸಂಘ ಸತತ 10 ವರ್ಷಗಳಿಂದ ಉಚಿತವಾಗಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಜ್ಯೋತಿಷಿ ಶಾರ್ಕೆ ರಾಮಕೃಷ್ಣ ಭಟ್ ಹೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ಶುಭ ಕೋರಿದರು. ಸಂಘದ ಗುರುಗಳಾದ ನವೀನ್ ಕೋಟ, ಕಾರ್ಯದರ್ಶಿ ಪ್ರವೀಣ್ ಎಂ.ಬಾಳಿಕೆರೆ, ಹಿಮ್ಮೇಳ ವಾದಕರಾದ ಭಾಸ್ಕರ್ ಆಚಾರ್ಯ ಕನ್ಯಾನ, ಗಣೇಶ್ ಶೆಣೈ ಶಿವಪುರ, ನಿರ್ಮಲ ನವೀನ ಕೋಟ ಉಪಸ್ಥಿತರಿದ್ದರು.
ನಾಗರಾಜ ಭಟ್ ಸ್ವಾಗತಿಸಿದರು. ಸಂಘದ ವ್ಯವಸ್ಥಾಪಕ ಗುರುರಾಜ್ ಭಟ್ ನಿರೂಪಿಸಿದರು. ವಿಘ್ನರಾಜ ಭಟ್ ವಂದಿಸಿದರು.