

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳ ವಾಗ್ದಾಳಿ ನಡೆಯುತ್ತಿದೆ. ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಹಾಗೂ ಬಿಜೆಪಿ ನಾಯಕರ ಒತ್ತಡವಿದೆ ಎಂದು ಆರೋಪಿಸಿದ್ದಾರೆ. ಅವರು ಕುಣಿಸಿದಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ರಾಜ್ಯಪಾಲರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ ಎಂದಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರ ಗಣಿ ಹಗರಣದ ತನಿಖೆಗೆ ಲೋಕಾಯುಕ್ತ ಸಂಸ್ಥೆಯು ಅನುಮತಿ ಕೇಳಿದ್ದರೂ ರಾಜ್ಯಪಾಲರು ಕಳೆದ 10 ತಿಂಗಳಿಂದ ಕಡತವನ್ನು ಮೂಲೆಗೆ ತಳ್ಳಿ ಕೂತಿದ್ದಾರೆ. ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆಗೆ ಅನುಮತಿ ಕೋರಿದ್ದರು. ಆದರೆ ಈ ಪ್ರಕರಣ ರಾಜ್ಯಪಾಲರ ಯಾವುದೆ ಪ್ರತಿಕ್ರಿಯೆ ಇಲ್ಲದೆ ಸುಮಾರು 2 ವರ್ಷಗಳಿಂದ ಬಾಕಿ ಉಳಿದಿದೆ. ಅದಷ್ಟೇ ಅಲ್ಲ ಮುರುಗೇಶ್ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆಗೆ ಅನುಮತಿ ಕೋರಿರುವ ಕಡತ ನಿದ್ರಾವಸ್ಥೆಯಲ್ಲಿದೆ. ಜನಾರ್ಧನ್ ರೆಡ್ಡಿಯ ಗಣಿ ಹಗರಣದ ಕಡತ ರಾಜಭವನದಲ್ಲಿ ಧೂಳು ಹಿಡಿದಿದೆ ಎಂದು ಸಚಿವರು ಈ ಮೊದಲ ಪ್ರಕರಣಗಳನ್ನು ಉಲ್ಲೇಖಿಸಿದರು.
ಬಿಜೆಪಿ ಮತ್ತು ಮಿತ್ರಪಕ್ಷದ ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಇದ್ದು, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿಚಾರದಲ್ಲಿ ಮಾತ್ರ ತಮ್ಮ ಮಂತ್ರದಂಡವನ್ನು ಉಪಯೋಗಿಸಿದ್ದಾರೆ. ಹೇಗಾದರೂ ಮಾಡಿ ಈ ಜನಪರ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಬೇಕೆಂದು ಹೊರಟಿರುವುದು ಕಾನೂನು ಬಾಹಿರವಾಗಿದ್ದು, ಇದು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನವಾಗಿದೆ ಎಂದಿದ್ದಾರೆ.